ಕೊಪ್ಪಳ:- ಅಂಗನವಾಡಿಯಲ್ಲಿ ಆಟವಾಡುತ್ತಿದ್ದ ಬಾಲಕಿ ದಿಢೀರನೆ ಬಿದ್ದು ಮೃತಪಟ್ಟ ಘಟನೆ ಕುಷ್ಟಗಿ ತಾಲೂಕಿನ ಬಳೂಟಗಿ ಗ್ರಾಮದಲ್ಲಿ ನಡೆದಿದೆ.
5 ವರ್ಷದ ಅಲಿಯಾ ಮಹ್ಮದ್ ರಿಯಾಜ್ ಮೃತ ಬಾಲಕಿ. ಸೋಮವಾರ ಮುಂಜಾನೆ ಎಂದಿನಂತೆ ಬಾಲಕಿ ಅಂಗನವಾಡಿಗೆ ಹೋಗಿದ್ದಳು. ಮುಂಜಾನೆ ಉಪಹಾರ ಸೇವಿಸಿದ್ದ ಬಾಲಕಿ ಚಟುವಟಿಕೆಯಿಂದಲೇ ಇದ್ದಳು. ಅಂಗನವಾಡಿಯಲ್ಲಿ ಎಲ್ಲ ಮಕ್ಕಳಂತೆ ಆಟವಾಡಿಕೊಂಡಿದ್ದಳು.
ಆದರೆ, ಮಧ್ಯಾಹ್ನ ಆಟವಾಡುತ್ತಿದ್ದಾಗ ದಿಢೀರನೆ ಕುಸಿದು ಬಿದ್ದಿದ್ದಾಳೆ. ಪೀಟ್ಸ್ ಬಂದವರಂತೆ ಆಡಿದ್ದಾಳೆ. ಬಾಲಕಿಯನ್ನು ನೋಡಿ ಅಂಗನವಾಡಿ ಸಹಾಯಕಿ ಓಡಿ ಬಂದಿದ್ದಾಳೆ. ಕೂಡಲೇ ಪಾಲಕರಿಗೆ ಮಾಹಿತಿ ನೀಡಲಾಗಿದೆ. ಕೂಡಲೆ ಬಾಲಕಿಯನ್ನು ಸಮೀಪದ ದೋಟಿಹಾಳ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಲಾಗಿದೆ. ಆದರೆ, ಆಸ್ಪತ್ರೆಗೆ ಹೋಗುವ ಮುನ್ನವೇ ಬಾಲಕಿ ಮೃತಪಟ್ಟಿದ್ದಳು.
ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ್ದರಿಂದ ಮಗು ಮೃತಪಟ್ಟಿದೆ ಅಂತ ವೈದ್ಯರು ಪಾಲಕರಿಗೆ ಮಾಹಿತಿ ನೀಡಿದ್ದಾರೆ. ದಿಢೀರನೆ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟುವುದರಿಂದ ಕೆಲವರಿಗೆ ಈ ರೀತಿಯಾಗುತ್ತದೆ. ಬಾಲಕಿ ಸಾವಿಗೆ ಇದೇ ಕಾರಣ ಅಂತ ಪೋಷಕರಿಗೆ ವೈದ್ಯರು ತಿಳಿಸಿದ್ದಾರೆ.



