ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಇದೀಗ ಎಲ್ಲೆಡೆ ಕನ್ನಡ ರಾಜ್ಯೋತ್ಸವದ ಗುಂಗು. ನವೆಂಬರ್ ತಿಂಗಳಿನಲ್ಲಿ ರಾಜ್ಯೋತ್ಸವವನ್ನು ಒಂದು ದಿನದ ಮಟ್ಟಿಗೆ ಆಚರಿಸಿ ಅದನ್ನು ಮರೆತುಬಿಡುವವರೇ ಅಧಿಕವಾಗಿರುವಾಗ ನಿತ್ಯ ನೂರಾರು ಪ್ರಯಾಣಿಕರನ್ನು ಹೊತ್ತು ಸಾಗಿಸುವ ಸಾರಿಗೆ ನಿಗಮದ ಲಕ್ಷ್ಮೇಶ್ವರದ ಬಸ್ ಚಾಲಕ ಎಸ್.ಪಿ. ಲಕ್ಷ್ಮಣ ಅವರ ಕನ್ನಡ ಪ್ರೇಮಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಕಳೆದ 26 ವರ್ಷಗಳಿಂದ ಪಟ್ಟಣದ ಸಾರಿಗೆ ಘಟಕದಲ್ಲಿ ಸೇವೆ ಸಲ್ಲಿಸುತ್ತಿರುವ ಚಾಲಕ ಲಕ್ಷ್ಮಣ ಸಮೀಪದ ಬಾಲೇಹೊಸೂರು ಗ್ರಾಮದವರಾಗಿದ್ದು, ಪಕ್ಕಾ ಕನ್ನಡಾಭಿಮಾನಿಯಾಗಿದ್ದಾರೆ. ನವೆಂಬರ್ ತಿಂಗಳ ಮೊದಲ ದಿನ ಇವರು ಬಸ್‌ಗೆ ಮಾಡುವ ಅಲಂಕಾರ ಎಲ್ಲರನ್ನು ಆಕರ್ಷಿಸುವಂತಿರುತ್ತದೆ. ಕಳೆದ 26 ವರ್ಷಗಳಿಂದಲೂ ಕನ್ನಡ ರಾಜ್ಯೋತ್ಸವ ಬಂತೆಂದರೆ ಸ್ವಂತ ಹಣ ಖರ್ಚು ಮಾಡಿ ಬಸ್ ಸಿಂಗಾರ ಮಾಡಿ ಭುವನೇಶ್ವರಿಗೆ ಪೂಜೆ ಸಲ್ಲಿಸಿ ಸಿಹಿ ಹಂಚುತ್ತಾ ಎಲ್ಲರಲ್ಲೂ ಕನ್ನಡ ಪ್ರೇಮ ಬೆಳೆಸುತ್ತಿದ್ದಾರೆ.
ಹಾಗೆಂದು ಲಕ್ಷ್ಮಣ ಇಲ್ಲಿಯವರೆಗೆ ಯಾವುದೇ ಪ್ರಚಾರ ಬಯಸಿಲ್ಲ. ಕಳೆದ 26 ವರ್ಷಗಳಿಂದ ಅಪಘಾತ ರಹಿತ ಚಾಲನೆ ಮಾಡಿರುವದು ಇವರ ಶ್ರೇಷ್ಠ ಕಾರ್ಯಗಳಲ್ಲಿ ಒಂದಾಗಿದ್ದು, ಅಪಘಾತರಹಿತ ಚಾಲನೆಗಾಗಿ 2016ರಲ್ಲಿ ಮುಖ್ಯಮಂತ್ರಿಗಳ ಚಿನ್ನದ ಪದಕ ಹಾಗೂ ಗದಗ ಜಿಲ್ಲೆಯಲ್ಲಿ ಉತ್ತಮ ಚಾಲಕನಾಗಿ ಬೆಳ್ಳಿ ಪದಕ ಪಡೆದಿದ್ದಾರೆ.
ಸಾರಿಗೆ ಇಲಾಖೆಯಲ್ಲಿ ಹಲವಾರು ಸಿಬ್ಬಂದಿಗಳು ಕನ್ನಡ ರಾಜ್ಯೋತ್ಸವದ ನಿಮಿತ್ತ ಹತ್ತು ಹಲವಾರು ಕಾರ್ಯಕ್ರಮಗಳನ್ನು ಸದ್ದಿಲ್ಲದೆ ಮಾಡುತ್ತಿದ್ದು, ಅದರಲ್ಲಿ ಲಕ್ಷ್ಮಣ ಕೂಡ ಓರ್ವರಾಗಿದ್ದಾರೆ.
ಲಕ್ಷ್ಮಣ ಅವರು ಚಾಲನೆ ಮಾಡುವ ಬಸ್ ಶುಕ್ರವಾರ ನವೆಂಬರ್ 1ರಂದು ಸಂಪೂರ್ಣವಾಗಿ ಕನ್ನಡಮಯವಾಗಿತ್ತು. ಕೆಂಪು-ಹಳದಿ ಬಲೂನ್, ರಿಬ್ಬನ್, ಬಾಳೆಕಂಬ ಸೇರಿದಂತೆ ತಳಿರು-ತೋರಣಗಳಿಂದ ಸಿಂಗರಿಸಿ ಭುವನೇಶ್ವರಿ ದೇವಿಯ ಭಾವಚಿತ್ರದೊಂದಿಗೆೆ ಸಿದ್ಧವಾಗಿ ನಿಂತಿತ್ತು. ಅದರಂತೆ ಚಾಲಕರಾದ ಎನ್.ಜಿ. ಬೇನಾಳ ಸಹ ತಮ್ಮ ವಾಹನವನ್ನು ಸಿಂಗರಿಸಿದ್ದು, ಬಸ್‌ನಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ, ಕನ್ನಡ ಕವಿಗಳ, ಸಾಹಿತಿಗಳ ಭಾವಚಿತ್ರಗಳಿಂದ ಸಿಂಗರಿಸಿದ್ದರು.
ಬಸ್ ನಿಲ್ದಾಣದಲ್ಲಿ ಬಸ್ ನೋಡಲು ಜನರು ಕುತೂಹಲದಿಂದ ಆಗಮಿಸಿ ಚಾಲಕ ಲಕ್ಷ್ಮಣ ಅವರೊಂದಿಗೆ ಕನ್ನಡ ತೇರಾಗಿ ಮಾರ್ಪಟ್ಟಿರುವ ಬಸ್‌ನ ಎದುರಿನಲ್ಲಿ ನಿಂತು ಪೋಟೋ ತೆಗೆಸಿಕೊಳ್ಳುತ್ತಿರುವದು ಕಂಡು ಬಂದಿತು. ಈ ಸಂದರ್ಭದಲ್ಲಿ ವಿಜಯ ಹತ್ತಿಕಾಳ, ಎಸ್.ಎಫ್. ಆದಿ, ಹರೀಶ ಲಕ್ಷ್ಮೇಶ್ವರ, ಸುರೇಶ ಹಟ್ಟಿ, ಪ್ರಕಾಶ ಕೊಂಚಿಗೇರಿಮಠ, ಲೋಕೇಶ ಸುತಾರ ಮುಂತಾದವರು ಎಸ್.ಪಿ. ಲಕ್ಷ್ಮಣ ಮತ್ತು ಬೇನಾಳ ಅವರನ್ನು ಸನ್ಮಾನಿಸಿದರು.
ಕನ್ನಡ ರಾಜ್ಯೋತ್ಸವ ಆಚರಣೆಯನ್ನು ತಮ್ಮ ಸ್ವಂತ ದುಡ್ಡಿನಲ್ಲಿ 25-26 ವರ್ಷಗಳಿಂದ ಪ್ರಾಮಾಣಿಕವಾಗಿ ಮಾಡಿಕೊಂಡು ಬಂದಿರುವ ಲಕ್ಷ್ಮಣ ಅವರ ಕಾರ್ಯ ಎಲ್ಲರಿಗೂ ಮಾದರಿಯಾಗಿದೆ. ಇಲಾಖೆಯಲ್ಲಿ ಇಂತಹ ಇನ್ನೂ ಅನೇಕರಿದ್ದು, ಅವರನ್ನು ಗುರುತಿಸಿ ಗೌರವಿಸುವ ಕಾರ್ಯ ಮಾಡಲಿ
– ಬಸವರಾಜ ಹಿರೇಮನಿ.
ಸಂಗೊಳ್ಳಿ ರಾಯಣ್ಣ ವೇದಿಕೆ ಜಿಲ್ಲಾಧ್ಯಕ್ಷ.