ಗದಗ:- ಗದಗ-ಬೆಟಗೇರಿ ಅವಳಿ ನಗರ ಸೇರಿದಂತೆ ಜಿಲ್ಲೆಯಲ್ಲಿ ಮಳೆಯ ಅಬ್ಬರ ಜೋರಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ನಿನ್ನೆ ಸಂಜೆ ಸುರಿದ ಭಾರೀ ಮಳೆಯಿಂದ ಬೆಟಗೇರಿ ರೈಲ್ವೆ ಕೆಳ ಸೇತುವೆಯಲ್ಲಿ ನೀರು ನಿಂತಿದ್ದು, ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.
ಮತ್ತೊಂದೆಡೆ ಏಕಾ ಏಕಿ ನೀರು ನುಗ್ಗಿದ ಪರಿಣಾಮ ಅಂಡರ್ ಬ್ರಿಡ್ಜ್ ನಲ್ಲಿ ಕಾರೊಂದು ಸಿಲುಕಿತು. ಕೂಡಲೇ ಚಾಲಕ ಕಾರು ಬಿಟ್ಟು ಅಲ್ಲಿಂದ ಹೊರ ಬಂದಿದ್ದಾನೆ. ಇನ್ನೂ ನಗರದ ಕಲಾಮಂದಿರ ರಸ್ತೆಯಲ್ಲಿ ಗಟಾರು ನೀರು ಹರಿದು ಅಸ್ತವ್ಯಸ್ತ ಉಂಟಾಗಿದ್ದು, ವಾಹನ ಸವಾರರು, ಬಸ್ ಪ್ರಯಾಣಿಕರು ಪರದಾಟ ನಡೆಸಿದರು. ಕೊಡೆ ಹಿಡಿದು ಬಸ್ ಏರಲು ಮಹಿಳೆಯರು ಹರ ಸಾಹಸ ಪಟ್ಟರು. ಮತ್ತೊಂದೆಡೆ ಬಸವೇಶ್ವರ ಸರ್ಕಲ್ ಬಳಿಯ ಹಳೆಯ ತರಕಾರಿ ಮಾರುಕಟ್ಟೆ ಕೆರೆಯಂತಾಗಿದ್ದು, ವ್ಯಾಪಾರಿಗಳು, ಗ್ರಾಹಕರು ಸಂಕಷ್ಟ ಪಡುವಂತೆ ಮಾಡಿದೆ.
ಹಳ್ಳದಲ್ಲಿ ಸಿಲುಕಿದ ಟ್ರ್ಯಾಕ್ಟರ್:
ಇನ್ನೂ ಗದಗ ಜಿಲ್ಲೆಯಾದ್ಯಂತ ವರುಣನ ಆರ್ಭಟ ಜೋರಾಗಿದ್ದು, ಸಾಕಷ್ಟು ಅವಾಂತರ ಮುಂದುವರಿದಿದೆ. ಅದರಂತೆ ಇಲ್ಲೊಂದು ಟ್ರ್ಯಾಕ್ಟರ್ ಇರುವೆ ಹಳ್ಳಕ್ಕೆ ಸಿಲುಕಿದ ಪರಿಣಾಮ ಟ್ರ್ಯಾಕ್ಟರ್ ಕೊಚ್ಚಿ ಹೋಗುವ ಭೀತಿಯಲ್ಲಿ ರೈತ ಕೆಲಕಾಲ ಕಂಗಾಲಾಗಿದ್ದಾನೆ.
ಗದಗ ಜಿಲ್ಲೆ ರೋಣ ತಾಲೂಕಿನ ಬೆಳವಣಕಿ ಗ್ರಾಮದ ಇರುವೆ ಹಳ್ಳದಲ್ಲಿ ಈ ಘಟನೆ ಜರುಗಿದ್ದು, ರೈತ ಮುತ್ತಪ್ಪ ಚವಡಿಯು, ಬಿತ್ತನೆ ಮಾಡಲು ಜಮೀನಿಗೆ ಟ್ರ್ಯಾಕ್ಟರ್ ಜೊತೆ ಹೋಗಿದ್ದ. ಮಳೆ ಬರುತ್ತಿದ್ದಂತೆ ಮನೆಗೆ ಬರುವ ವೇಳೆ ಹಳ್ಳದಲ್ಲಿ ಟ್ರ್ಯಾಕ್ಟರ್ ಸಿಲುಕಿದೆ. ಹೀಗಾಗಿ ಟ್ರ್ಯಾಕ್ಟರ್ ಅಲ್ಲೇ ಬಿಟ್ಟು ರೈತ ಮನೆಗೆ ಹೋಗಿದ್ದ. ಅದೃಷ್ಟವಶಾತ್ ರೈತನಿಗೆ ಯಾವುದೇ ಅಪಾಯ ಸಂಭವಿಸಿಲ್ಲ. ಇನ್ನೂ ಹಳ್ಳದಲ್ಲಿ ಟ್ರ್ಯಾಕ್ಟರ್ ಸಿಲುಕಿದ್ದು, ಟ್ರ್ಯಾಕ್ಟರ್ ಕೊಚ್ಚಿ ಹೋಗುವ ಭೀತಿಯಲ್ಲಿ ರೈತನಿದ್ದಾನೆ.
ಹಳ್ಳದ ಸೇತುವೆ ಅಗಲಿಕರಣ ಮಾಡಿ ನಿರ್ಮಿಸಲು ಹಲವಾರು ಬಾರಿ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಹೇಳಿದರೂ ಇದುವರೆಗೂ ನಿರ್ಮಾಣ ಮಾಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.