ಶಿವಮೊಗ್ಗ: ರಾಜಕೀಯ ಕಾರ್ಯಕ್ರಮಗಳಿಗಿಂತ ಸಮಾಜಮುಖಿ ಕಾರ್ಯಗಳಿಗೆ ಆದ್ಯತೆ ನೀಡುವ ಮೂಲಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಮ್ಮ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಿದರು. ಸೊರಬ ಕ್ಷೇತ್ರದ ಪೌರಕಾರ್ಮಿಕರು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ವಿಮಾನಯಾನ ವ್ಯವಸ್ಥೆ ಮಾಡಿರುವುದು ಈ ವರ್ಷದ ವಿಶೇಷತೆ.
ಸೊರಬ ಪುರಸಭೆ ಮತ್ತು ಆನವಟ್ಟಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 36 ಪೌರಕಾರ್ಮಿಕರು ಮೊದಲ ಬಾರಿಗೆ ವಿಮಾನ ಹತ್ತುವ ಅವಕಾಶ ಪಡೆದರು. ಜೊತೆಗೆ ಸೊರಬ ತಾಲೂಕಿನ ಸರ್ಕಾರಿ ಶಾಲೆಗಳಲ್ಲಿ ಕಳೆದ ಸಾಲಿನಲ್ಲಿ ಶೇ.97ಕ್ಕಿಂತ ಹೆಚ್ಚು ಅಂಕ ಗಳಿಸಿದ 30 ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಸೇರಿದಂತೆ ಒಟ್ಟು 100ಕ್ಕೂ ಹೆಚ್ಚು ಮಂದಿ ಶಿವಮೊಗ್ಗದಿಂದ ಬೆಂಗಳೂರಿಗೆ ವಿಮಾನದಲ್ಲಿ ಪ್ರಯಾಣಿಸಿದರು.
ನಗರ ಸ್ವಚ್ಛತೆಗೆ ದಿನನಿತ್ಯ ಶ್ರಮಿಸುವ ಕಾರ್ಮಿಕರಿಗೆ ಈ ಪ್ರಯಾಣ ಸ್ಮರಣೀಯ ಅನುಭವವಾಗಿದ್ದು, ಸಾಮಾಜಿಕವಾಗಿ ಗೌರವ ಸೂಚಿಸುವ ಸಂಕೇತವಾಗಿ ಪರಿಣಮಿಸಿದೆ. ಇದೇ ವೇಳೆ ಮೇಧಾವಿ ವಿದ್ಯಾರ್ಥಿಗಳನ್ನು ಉತ್ತೇಜಿಸುವ ಉದ್ದೇಶವೂ ಸ್ಪಷ್ಟವಾಗಿ ಕಾಣಿಸಿಕೊಂಡಿತು.
IndiGo ವಿಮಾನದ ಮೂಲಕ ನಡೆದ ಈ ಪ್ರಯಾಣದಲ್ಲಿ ಸಚಿವರು ಸ್ವತಃ ಪಾಲ್ಗೊಂಡು ಪೌರಕಾರ್ಮಿಕರು ಹಾಗೂ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಸಾರ್ವಜನಿಕ ಸೇವೆ ಹಾಗೂ ಶಿಕ್ಷಣ ಪ್ರೋತ್ಸಾಹವನ್ನು ಒಂದೇ ವೇದಿಕೆಯಲ್ಲಿ ಮೇಳೈಸಿದ ಈ ಕಾರ್ಯಕ್ರಮಕ್ಕೆ ವಿವಿಧ ವಲಯಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.



