ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ನಿರ್ದೇಶನದಂತೆ ಶಿರಹಟ್ಟಿ ಪೊಲೀಸರಿಂದ ಕೋಡ್ ರೆಡ್ ನಾಕಾಬಂದಿ ವ್ಯವಸ್ಥೆ ಜಾರಿಗೊಳಿಸಿ ವಾಹನ ತಪಾಸಣೆ ನಡೆಸಲಾಗುತ್ತಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಶಿರಹಟ್ಟಿ ಸಿಪಿಐ ನಾಗರಾಜ ಮಾಢಳ್ಳಿ, ಪಿಎಸ್ಐ ಚನ್ನಯ್ಯ ದೇವೂರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನಿರ್ದೇಶನದಂತೆ ಶಿರಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶಿರಹಟ್ಟಿಯ ನೆಹರು ವೃತ್ತ ಹಾಗೂ ನೆಲೋಗಲ್ ಬಳಿ ಮತ್ತು ಲಕ್ಮೇಶ್ವರ ಠಾಣಾ ವ್ಯಾಪ್ತಿಯಲ್ಲಿ ಸವಣೂರು ಕ್ರಾಸ್ ಮತ್ತು ಗದಗ ಕ್ರಾಸ್ಗಳಲ್ಲಿ ಕೋಡ್ ರೆಡ್ ನಾಕಾಬಂದಿ ಮಾಡಲಾಗಿದೆ. ಈ ನಾಲ್ಕು ನಾಕಾಬಂದಿಗಳಲ್ಲಿ ಅಗತ್ಯ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, ವಿಜಿಬಲ್ ಪೊಲೀಸಿಂಗ್ ವ್ಯವಸ್ಥೆಯನ್ನು ನಿರ್ವಹಿಸಲಿದ್ದಾರೆ.
ಅಪರಾಧ ಪ್ರಕರಣಗಳ ಸಂಖ್ಯೆಯನ್ನು ಕಡಿಮೆ ಮಾಡುವುದು, ಸಂಚಾರಿ ನಿಯಮಗಳ ಪಾಲನೆ, ಸಂಶಯಾಸ್ಪದವಾಗಿ ಸಂಚರಿಸುವ ವಾಹನಗಳ ತಪಾಸಣೆ ಮಾಡುವುದರ ಜೊತೆಗೆ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುವವರನ್ನು ಶೀಘ್ರವೇ ಪತ್ತೆ ಹಚ್ಚುವ ಕೆಲಸ ಇದಾಗಿದೆ ಎಂದರು.