ವಿಜಯಸಾಕ್ಷಿ ಸುದ್ದಿ, ಗದಗ: ಯಾವುದೇ ಒಂದು ರಾಷ್ಟ್ರ ಸರ್ವ ರೀತಿಯಿಂದಲೂ ಅಭಿವೃದ್ಧಿ ಸಾಧಿಸಬೇಕಾದರೆ ಪರಿಪೂರ್ಣವಾದ ಶಿಕ್ಷಣದ ಅವಶ್ಯಕತೆ ಇರುವ ಕಾರಣ, ಅದನ್ನು ಸಮರ್ಥವಾಗಿ ನಿರ್ವಹಿಸಿ ವಿದ್ಯಾರ್ಥಿಗಳನ್ನು ಶೈಕ್ಷಣಿಕ ಮಾರ್ಗದತ್ತ ನಡೆಸುವ ಕಾರ್ಯವನ್ನು ಒಬ್ಬ ಶಿಕ್ಷಕ ಮಾಡುತ್ತಾನೆ. ಆ ಮೂಲಕ ಒಬ್ಬ ಸಮರ್ಥ ಶಿಕ್ಷಕ ರಾಷ್ಟ್ರರಕ್ಷಕನಾಗಬಲ್ಲ ಎಂದು ಸ್ಟುಡೆಂಟ್ಸ್ ಎಜ್ಯುಕೇಶನ್ ಸಂಸ್ಥೆಯ ಚೇರ್‌ಮನ್ ಪ್ರೋ. ರಾಜೇಶ ಕುಲಕರ್ಣಿ ಅಭಿಪ್ರಾಯಪಟ್ಟರು.
ನಗರದ ಸನ್ಮಾರ್ಗ ಪದವಿಪೂರ್ವ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಆಚರಿಸಿದ ‘ಶಿಕ್ಷಕರ ದಿನಾಚರಣೆ’ಯ ಸಂದರ್ಭದಲ್ಲಿ ಮಾತನಾಡಿದ ಅವರು, ಆಚರಣೆಯ ಮೂಲಕ ಗುರುವಂದನೆ ಸಲ್ಲಿಸಿದ ಸಕಲ ವಿದ್ಯಾರ್ಥಿ ವೃಂದಕ್ಕೆ ವಿದ್ಯಾಲಯದ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಇಂಗ್ಲಿಷ್ ಉಪನ್ಯಾಸಕ ಮುರಲೀಧರ ಸಂಕನೂರ, ನಿರಂತರ ಅಧ್ಯಯನವೇ ವಿದ್ಯಾರ್ಥಿಯ ಶೈಕ್ಷಣಿಕ ಪರಿಪೂರ್ಣತೆಗೆ ಬುನಾದಿ ಎಂದು ತಿಳಿಸಿದರು. ಸಂಸ್ಥೆಯ ನಿರ್ದೇಶಕರಾದ ಪ್ರೊ. ಪುನೀತ ದೇಶಪಾಂಡೆ, ಪ್ರೊ. ರೋಹಿತ ಒಡೆಯರ್, ಪ್ರಾಚಾರ್ಯ ಪ್ರೊ. ಪ್ರೇಮಾನಂದ ರೋಣದ ಮಾತನಾಡಿದರು.
ಸಮಾರಂಭದಲ್ಲಿ ಆಡಳಿತಾಧಿಕಾರಿಗಳಾದ ಎಮ್.ಸಿ. ಹಿರೇಮಠ, ನಿರ್ದೇಶಕರಾದ ಪ್ರೊ. ರಾಹುಲ ಒಡೆಯರ್, ಪ್ರೊ. ಸೈಯ್ಯದ್ ಮತೀನ್ ಮುಲ್ಲಾ ಹಾಗೂ ಕಾಲೇಜಿನ ಸಮಸ್ತ ಬೋಧಕ-ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಶಿಕ್ಷಕರ ದಿನಾಚರಣೆಯ ಬಗ್ಗೆ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ಹೇಳಿದರು. ವಿದ್ಯಾರ್ಥಿಗಳಾದ ಪ್ರಾಚಿ ಕಬಾಡಿ ಮತ್ತು ಜೀಕ್ರಾ ಸುಂಕದ ಕಾರ್ಯಕ್ರಮ ನಿರೂಪಿಸಿದರು, ಸಮರ್ಥ ಚವ್ಹಾಣ ವಂದಿಸಿದರು.



