ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯ ಸರ್ಕಾರದಿಂದ ರಾಜ್ಯಾದ್ಯಂತ 8 ಲಕ್ಷಕ್ಕೂ ಹೆಚ್ಚು ಬಡವರ ಬಿ.ಪಿ.ಎಲ್ ಪಡಿತರ ಚೀಟಿಗಳನ್ನು ಏಕಾಏಕಿಯಾಗಿ ರದ್ದುಗೊಳಿಸಿದ್ದರಿಂದ ಲಕ್ಷಾಂತರ ಬಡ ಕುಟುಂಬಗಳು ಬೀದಿಗೆ ಬಂದಿವೆ. ಪಡಿತರ ಚೀಟಿಗಳನ್ನು ರದ್ದುಗೊಳಿಸಿ ಸರ್ಕಾರದ ಯೋಜನೆಗಳಿಂದ ವಂಚಿಸುತ್ತಿರುವ ಸರ್ಕಾರದ ಕ್ರಮವನ್ನು ಖಂಡಿಸಿ ಸ್ಲಂ ಜನಾಂದೋಲನ-ಕರ್ನಾಟಕ ಮತ್ತು ಗದಗ ಜಿಲ್ಲಾ ಸ್ಲಂ ಸಮಿತಿಯಿಂದ ಗಾಂಧಿ ಸರ್ಕಲ್ನಿಂದ ರ್ಯಾಲಿಯನ್ನು ನಡೆಸಿ ಆಹಾರ ಇಲಾಖೆ ಕಚೇರಿಯೆದುರು ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಗದಗ ಜಿಲ್ಲಾ ಸ್ಲಂ ಸಮಿತಿ ಅಧ್ಯಕ್ಷ ಇಮ್ತಿಯಾಜ ಆರ್. ಮಾನ್ವಿ ಮಾತನಾಡಿ, 2023ರಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ ರಾಜ್ಯ ಸರ್ಕಾರ 1.20 ಲಕ್ಷ ರೂ ವಾರ್ಷಿಕ ಆದಾಯ ಹೊಂದಿರುವ ಕಾರಣ ನೀಡಿ ಪಡಿತರ ಚೀಟಿಗಳನ್ನು ರದ್ದುಗೊಳಿಸಿ ಲಕ್ಷಾಂತರ ಕುಟುಂಬಗಳನ್ನು ಬೀದಿಗೆ ತಂದಿದೆ. ರಾಜ್ಯ ಸರ್ಕಾರದ ಜನವಿರೋಧಿ ನೀತಿಯಿಂದ, ಆಹಾರ ಇಲಾಖೆಯ ಎಡವಟ್ಟಿನಿಂದ ಗದಗ-ಬೆಟಗೇರಿ ನಗರದ 2304 ಕಾರ್ಡ್ಗಳು ಮತ್ತು ಗದಗ ಗ್ರಾಮೀಣ ಭಾಗದ 1478 ಕಾರ್ಡ್ಗಳನ್ನು ರದ್ದುಗೊಳಿಸಿದ್ದು, ಸಾವಿರಾರು ಕುಟುಂಬಗಳು ಉಪವಾಸ ಬೀಳುವ ಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.
ಪಡಿತರ ಚೀಟಿ ರದ್ದುಗೊಂಡಿರುವ ಫಲಾನುಭವಿಗಳಿಗೆ ಆಹಾರ ಇಲಾಖೆಯಿಂದ ಯಾವುದೇ ನೋಟಿಸ್ ನೀಡದೇ, ಈ ಕುಟುಂಬಗಳ ಸಮೀಕ್ಷೆಯನ್ನು ನಡೆಸದೇ ಮತ್ತು ಪಡಿತರ ಅಂಗಡಿಗಳ ಮುಂದೆ ಮಾಹಿತಿಯನ್ನು ಹಚ್ಚದೇ ಏಕಾಏಕಿ ಸಾವಿರಾರು ಕಾರ್ಡ್ಗಳನ್ನು ರದ್ದುಗೊಳಿಸಿದ್ದರಿಂದ ಬಡ ಕುಟುಂಬಗಳು ಆಹಾರ ಇಲಾಖೆ ಮುಂದೆ ನಿಂತು ಕಣ್ಣೀರು ಹಾಕುತ್ತಿದ್ದಾರೆ. ಇದು ಕೇವಲ ರಾಜ್ಯದ ಬಡ ಕುಟುಂಬಗಳನ್ನು ಪಂಚ ಗ್ಯಾರಂಟಿ ಯೋಜನೆಗಳಿಂದ ವಂಚಿಸುವ ಹುನ್ನಾರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಗದಗ ಜಿಲ್ಲಾ ಸ್ಲಂ ಸಮಿತಿ ಉಪಾಧ್ಯಕ್ಷ ಅಶೋಕ ಕುಡತಿನ್ನಿ, ಕಾರ್ಯದರ್ಶಿ ಅಶೋಕ ಕುಸಬಿ, ಸಮಿತಿ ಮುಖಂಡರಾದ ಇಬ್ರಾಹಿಂ ಮುಲ್ಲಾ, ಶರಣಪ್ಪ ಸೂಡಿ, ಮೌಲಾಸಾಬ ಗಚ್ಚಿ, ಖಾಜಾಸಾಬ ಮುಲ್ಲಾನವರ, ಮೆಹರುನಿಸಾ ಡಂಬಳ, ಜಂದಿಸಾಬ ಢಾಲಾಯತ, ಮಕ್ತುಮಸಾಬ ಮುಲ್ಲಾನವರ, ಬಾಷಾಸಾಬ ಡಂಬಳ, ಮೈಮುನ ಬೈರಕದಾರ, ವೆಂಕಟೇಶ ಬಿಂಕದಕಟ್ಟಿ, ಗೌಸಸಾಬ ಅಕ್ಕಿ, ರವಿ ಗೋಸಾವಿ, ಸಾಕ್ರುಬಾಯಿ ಗೋಸಾವಿ ಮುಂತಾದವರು ಭಾಗವಹಿಸಿದ್ದರು.
ಮಹಿಳಾ ಸಂಚಾಲಕಿ ಪರವೀನಬಾನು ಹವಾಲ್ದಾರ ಮಾತನಾಡಿ, ಬಿ.ಪಿ.ಎಲ್ ಪಡಿತರ ಚೀಟಿಗಳ ಮೂಲಕ ಸಬ್ಸಿಡಿ ದರದಲ್ಲಿ ಆಹಾರ ಧಾನ್ಯ ಪಡೆಯಲು ಕಡ್ಡಾಯ ದಾಖಲೆಯಾಗಿದೆ. ಸರ್ಕಾರದ ಹಲವಾರು ಯೋಜನೆಗಳಿಗೆ ಅರ್ಜಿ ಸಲ್ಲಿಸುವಾಗ ಪಡಿತರ ಚೀಟಿ ಗುರುತಿನ ಪುರಾವೆ ಆಗಿರುತ್ತದೆ. ಆದರೆ ಆಹಾರ ಇಲಾಖೆ ಅಧಿಕಾರಿಗಳು ಕಚೇರಿಯಲ್ಲಿಯೇ ಕುಳಿತು ಸಾವಿರಾರು ಬಡ ಕುಟುಂಬಗಳ ಕಾರ್ಡ್ಗಳನ್ನು ರದ್ದುಗೊಳಿಸಿದ್ದಾರೆ. ಸರ್ಕಾರದ ಇಂತಹ ಜನವಿರೋಧಿ ನಿರ್ಧಾರದಿಂದ ಸಾವಿರಾರು ಬಡ ಕುಟುಂಬಗಳು ಉಪವಾಸ ಬೀಳುವ ಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.