ಬೆಂಗಳೂರು:- ಮನೆಯ ಬಾಲ್ಕನಿಯಲ್ಲಿ ಹೂವಿನ ಪಾಟ್ ಗಳ ನಡುವೆ ಮಾದಕವಸ್ತು ಗಾಂಜಾ ಗಿಡ ಬೆಳೆದಿದ್ದ ದಂಪತಿಯನ್ನು ಸದಾಶಿವನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಎಂ.ಎಸ್.ರಾಮಯ್ಯ ನಗರದ 3ನೇ ಮುಖ್ಯರಸ್ತೆ 6ನೇ ಅಡ್ಡರಸ್ತೆ ನಿವಾಸಿಗಳಾದ ಊರ್ಮಿಳಾ ಕುಮಾರಿ(37) ಮತ್ತು ಸಾಗರ್ ಗುರುಂಗ್(38) ಬಂಧಿತ ದಂಪತಿ.
ಆರೋಪಿಗಳಿಂದ 54 ಗ್ರಾಂ ಗಾಂಜಾ ಸೊಪ್ಪು, ಎರಡು ಪಾಟ್ ಹಾಗೂ ಮೊಬೈಲ್ ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಊರ್ಮಿಳಾ ಕುಮಾರಿ ಮನೆಯ ಬಾಲ್ಕನಿಯಲ್ಲಿ ಹೂವಿನ ಗಿಡಗಳ ನಡುವೆ ಗಾಂಜಾ ಬೆಳೆಸಿರುವುದಾಗಿ ವಿಡಿಯೋ ಮಾಡಿ ಆ ವಿಡಿಯೊವನ್ನು ತನ್ನ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಳು.
ಈ ಸಂಬಂಧ ಸಿಕ್ಕ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಗಾಂಜಾ ಗಿಡ ಸಹಿತ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಆರೋಪಿಗಳು ಮನೆಯ ಬಾಲ್ಕನಿಯಲ್ಲಿ ಸುಮಾರು 15 ಪಾಟ್ ಗಳಲ್ಲಿ ವಿವಿಧ ಹೂವಿನ ಗಿಡಗಳನ್ನು ಬೆಳೆಸಿದ್ದರು. ಈ ನಡುವೆ ಎರಡು ಪಾಟ್ ಗಳಲ್ಲಿ ಗಾಂಜಾ ಗಿಡಗಳನ್ನು ಬೆಳೆಸಿದ್ದರು.
ಈ ಬಗ್ಗೆ ಮಾಹಿತಿ ಸಂಗ್ರಹಿಸಿ ಮನೆ ಮೇಲೆ ದಾಳಿ ಮಾಡಿದಾಗ ಆರೋಪಿಗಳು ಭಯಗೊಂಡು ಗಾಂಜಾ ಗಿಡಗಳನ್ನು ಪಾಟ್ ನಿಂದ ಕಿತ್ತು ಡಸ್ಟ್ ಬಿನ್ ಗೆ ಎಸೆದಿದ್ದರು. ಪರಿಶೀಲನೆ ವೇಳೆ ಡಸ್ಟ್ ಬಿನ್ ನಲ್ಲಿ ಮುರಿದ ಗಾಂಜಾ ಗಿಡದ ಎಲೆಗಳು ಹಾಗೂ ಕಾಂಡ ಪತ್ತೆಯಾಯಿತು.
ಬಳಿಕ ಆಕೆಯ ಮೊಬೈಲ್ ವಶಕ್ಕೆ ಪಡೆದು ಪರಿಶೀಲಿಸಿದಾಗ ಗಾಂಜಾ ಗಿಡಗಳ ವಿಡಿಯೋಗಳು ಪತ್ತೆಯಾದವು. ಹೀಗಾಗಿ ಮಾಲುಗಳನ್ನು ಜಪ್ತಿ ಮಾಡಿ ದಂಪತಿಯನ್ನು ಬಂಧಿಸಲಾಗಿದೆ.
ಈ ಸಂಬಂಧ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಎನ್ ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ.