ಚಿತ್ರದುರ್ಗ: ಮದುವೆ ಮಾಡಿಕೊಡಲಿಲ್ಲ ಎಂಬ ಕಾರಣಕ್ಕೆ ಮಗನೊಬ್ಬ ತನ್ನ ತಂದೆಯನ್ನೇ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ಅತ್ತಿಘಟ್ಟ ಗ್ರಾಮದಲ್ಲಿ ನಡೆದಿದೆ.
ಮೃತ ದುರ್ದೈವಿಯನ್ನು ಅತ್ತಿಘಟ್ಟ ಗ್ರಾಮದ ಸಣ್ಣ ನಿಂಗಪ್ಪ ಎಂದು ಗುರುತಿಸಲಾಗಿದೆ. ಪುತ್ರ ಲಿಂಗರಾಜ್ ಆರೋಪಿಯಾಗಿದ್ದಾನೆ. ವಯಸ್ಸಾಗಿದ್ದು ಕೂಡ ಮದುವೆ ಮಾಡಿಕೊಡುತ್ತಿಲ್ಲ ಎಂದು ತಂದೆಯ ಮೇಲೆ ನಿರಂತರವಾಗಿ ಒತ್ತಡ ಹಾಕುತ್ತಿದ್ದನು ಎಂದು ತಿಳಿದು ಬಂದಿದೆ.
ಇದೇ ವೇಳೆ ತಂದೆ ಮನೆಯಲ್ಲಿ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬ ವಿಚಾರಕ್ಕೂ ಲಿಂಗರಾಜ್ ಕೋಪಗೊಂಡಿದ್ದ. ಈ ಎರಡೂ ವಿಚಾರಗಳ ಕುರಿತು ತಂದೆ–ಮಗನ ನಡುವೆ ಮಾತಿನ ಚಕಮಕಿ ನಡೆದಿದೆ. ಜಗಳ ವಿಕೋಪಕ್ಕೆ ತಿರುಗಿದಾಗ ಲಿಂಗರಾಜ್ ಕಬ್ಬಿಣದ ರಾಡಿನಿಂದ ತಂದೆಯ ತಲೆಗೆ ಹೊಡೆದು ಗಂಭೀರವಾಗಿ ಹಲ್ಲೆ ನಡೆಸಿದ್ದಾನೆ.
ತೀವ್ರವಾಗಿ ಗಾಯಗೊಂಡ ಸಣ್ಣ ನಿಂಗಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿತ ಲಿಂಗರಾಜ್ನನ್ನು ಪೊಲೀಸರು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ.



