ವಿಜಯಸಾಕ್ಷಿ ಸುದ್ದಿ, ಧಾರವಾಡ : ಧಾರವಾಡ ಲೋಕಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ಲೋಕಸಭಾ ಸಾರ್ವತ್ರಿಕ ಚುಣಾವಣೆ ಮೇ 7ರಂದು ಜರುಗಿದ್ದು, ಜೂ.4ರಂದು ಮತ ಎಣಿಕೆ ಜರುಗುವ ಹಿನ್ನೆಲೆಯಲ್ಲಿ ಧಾರವಾಡ ಕೃಷಿ ವಿಶ್ವವಿದ್ಯಾಲಯ ವ್ಯಾಪ್ತಿಯ 200 ಮೀಟರ್ ವ್ಯಾಪ್ತಿಯ ಸುತ್ತಮುತ್ತಲಿನ ಪ್ರದೇಶದಲ್ಲಿ ಪ್ರತಿಬಂಧಕಾಜ್ಞೆ ಜಾರಿಗೊಳಿಸಿ, ಜಿಲ್ಲಾಧಿಕಾರಿ ದಿವ್ಯ ಪ್ರಭು ಆದೇಶಿಸಿದ್ದಾರೆ.
ಜೂನ್ 4ರಂದು ಮತ ಎಣಿಕೆ ಇರುವುದರಿಂದ ಜಿಲ್ಲೆಯ ಕೃವಿವಿಯ ಮತ ಎಣಿಕೆ ಕೇಂದ್ರದ ವ್ಯಾಪ್ತಿಯ 200 ಮೀಟರ್ ಸುತ್ತಮುತ್ತಲಿನ ಪ್ರದೇಶದಲ್ಲಿ ಜೂನ್ 2ರ ಬೆಳಿಗ್ಗೆ 6 ಗಂಟೆಯಿಂದ ಜೂನ್ 5ರ ಸಂಜೆ 6 ಗಂಟೆಯವರೆಗೆ ಸಿ.ಆರ್.ಪಿ.ಸಿ 1973ರ ಕಲಂ 144 ಮತ್ತು ಕರ್ನಾಟಕ ಪೊಲೀಸ್ ಕಾಯ್ದೆ 1963ರ ಕಲಂ 35ರಡಿ ಪ್ರತಿಬಂಧಕಾಜ್ಞೆಯನ್ನು ಜಾರಿ ಮಾಡಿ ಆದೇಶಿಸಿದ್ದಾರೆ.
ಮತ ಎಣಿಕೆಯ ದಿನದಂದು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆಯಾಗಿ ಮತ್ತು ಮತದಾನದ ಪ್ರಾವಿತ್ರ‍್ಯತೆಯನ್ನು ಕಾಪಾಡುವ ಹಿತದೃಷ್ಟಿಯಿಂದ ಸಿ.ಆರ್.ಪಿ.ಸಿ 1973ರ ಕಲಂ 144 ಮತ್ತು ಕರ್ನಾಟಕ ಪೊಲೀಸ್ ಕಾಯ್ದೆ 1963ರ ಕಲಂ 35ರ ಮೇರೆಗೆ ಪ್ರತಿಬಂಧಕಾಜ್ಞೆ ವಿಧಿಸಿದ್ದು, ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ಭಾರತೀಯ ದಂಡ ಸಂಹಿತೆ ಕಲಂ 188ರ ಪ್ರಕಾರ ಕ್ರಮವನ್ನು ಜರುಗಿಸಲು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ದಿವ್ಯ ಪ್ರಭು ಆದೇಶದಲ್ಲಿ ತಿಳಿಸಿದ್ದಾರೆ.