ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಅತಿವೃಷ್ಟಿ, ರೋಗಬಾಧೆಯಿಂದ ಮುಂಗಾರಿನ ಬೆಳೆಗಳೆಲ್ಲ ಹಾಳಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿ ರೈತರು ಸೇರಿ ಜನಸಮುದಾಯ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ರೈತರ ಮಟ್ಟಿಗೆ ಈ ವರ್ಷ ನಂಬಿದ ದೇವರೂ ಕೈಹಿಡಿಯಲು ಮನಸ್ಸು ಮಾಡಿದಂತಿಲ್ಲ. ಸಂಕಷ್ಟದ ನಡುವೆಯೂ ಸಂಕಷ್ಟ ನಿವಾರಕ, ವಿಘ್ನನಾಶಕ, ಪ್ರಥಮ ವಂದಿತ ಗಣೇಶನಿಗೆಂದೇ ಮೀಸಲಾದ ಗಣೇಶ ಚತುರ್ಥಿ ಹಬ್ಬವನ್ನು ಸಾಂಪ್ರದಾಯಿಕವಾಗಿ ಆಚರಿಸಲು ಜನತೆ ಸಜ್ಜಾಗಿದ್ದಾರೆ. ಹಬ್ಬದ ಮುನ್ನಾದಿನ ಮಂಗಳವಾರ ಪಟ್ಟಣದ ಮಾರ್ಕೆಟ್‌ನಲ್ಲಿ ಗಣೇಶ ಮೂರ್ತಿ, ಹೂವು, ಹಣ್ಣು, ತಳಿರು-ತೋರಣ, ದಿನಸಿ, ಪಟಾಕಿ, ಅಲಂಕಾರಿಕ ಮತ್ತು ಅಗತ್ಯ ವಸ್ತುಗಳ ಖರೀದಿಯಲ್ಲಿ ತೊಡಗಿದ್ದು ಕಂಡುಬಂದಿತು.
`ಒಕ್ಕಲಿಗ ಒಕ್ಕದಿದ್ದರೆ ಬಿಕ್ಕುವುದು ಜಗೆವೆಲ್ಲ’ ಎನ್ನುವಂತೆ ರೈತರಿಗೆ ಸಮೃದ್ಧಿಯಾದಾಗ ಮಾತ್ರ ಎಲ್ಲರೂ ಸಂಭ್ರಮದಲ್ಲಿರುತ್ತಾರೆ. ಆದರೆ ರೈತ ನಷ್ಟದಲ್ಲಿರುವುದು ಎಲ್ಲ ರೀತಿಯ ವ್ಯಾಪಾರ-ವಹಿವಾಟು, ಹಬ್ಬದ ಸಂಭ್ರಮಕ್ಕೆ ಕರಿನೆರಳು ಆವರಿಸಿದಂತಾಗಿದೆ.
ಪಟ್ಟಣಕ್ಕೆ ತಾಲೂಕಿನ ಜನರಷ್ಟೇ ಅಲ್ಲದೆ ನೆರೆಯ ಕುಂದಗೋಳ, ಶಿರಹಟ್ಟಿ, ಶಿಗ್ಗಾಂವ, ಸವಣೂರ ತಾಲೂಕಿನ ಜನರೂ ವ್ಯಾಪಾರಕ್ಕೆ ಬರುವುದರಿಂದ ಮುಖ್ಯ ಮಾರುಕಟ್ಟೆ ಪ್ರದೇಶ ಜನಸಂದಣಿಯಿಂದ ತುಂಬಿ ಟ್ರಾಫಿಕ್ ಕಿರಿಕಿರಿ ಉಂಟಾಯಿತು. ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಪೊಲೀಸರು ಹರಸಾಹಸ ಪಟ್ಟರು. ಹಬ್ಬದ ದಿನ ಇನ್ನೂ ಹೆಚ್ಚಿನ ಟ್ರಾಫಿಕ್ ಉಂಟಾಗುವುರಿಂದ ಪುರಸಭೆ ಮತ್ತು ಪೊಲೀಸರು ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂಬ ಮಾತುಗಳು ಸಾರ್ವಜನಿಕರಿಂದ ಕೇಳಿಬಂದವು.
ಬಸ್ ನಿಲ್ದಾಣದಲ್ಲಿ ಹೆಚ್ಚಿನ ಜನಸಂದಣಿ, ಸಂಚಾರದಿಂದ ಕೂಡಿತ್ತು. ಬಸ್‌ಗಳಂತೂ ತುಂಬಿ ತುಳುಕುತ್ತಲೇ ಸಾಗಿದವು. ಪ್ರಥಮ ಪೂಜಿತ ವಿನಾಯಕನ ಸ್ವಾಗತಕ್ಕಾಗಿ ತಾಲೂಕಿನಾದ್ಯಂತ ಜನತೆ ಪೂರ್ವ ಸಿದ್ಧತೆ ಮಾಡಿಕೊಂಡಿದ್ದು, ತಮ್ಮ ಪೂಜೆಯನ್ನು ಸ್ವೀಕರಿಸಿಯಾದರೂ ಗಣಪ ಸಂತುಷ್ಟನಾಗಿ ಅನುಗ್ರಹಿಸಿದರೆ ಸಾಕು ಎಂಬ ಭಾವ ಎಲ್ಲರ ಮೊಗದಲ್ಲಿತ್ತು.
ಡಜನ್ ಬಾಳೆ ಹಣ್ಣು ಸೇರಿ ಸೇಬು, ಕಿತ್ತಳೆ, ಚಿಕ್ಕೂ, ಮೋಸಂಬಿ ಒಳಗೊಂಡ ಒಟ್ಟು 5 ತರಹದ ಹಣ್ಣುಗಳ ಸೆಟ್‌ಗೆ 150-200 ರೂ.ವರೆಗೆ ದರವಿತ್ತು. ದಿನಸಿ, ಅಲಂಕಾರಿಕ ವಸ್ತುಗಳು, ಹೂವು, ಬಾಳೆ, ಕಬ್ಬು, ವಿಳ್ಯದೆಲೆ ಸೇರಿ ಹಬ್ಬದ ಸಾಮಗ್ರಿಗಳ ಬೆಲೆ ಕೊಂಚ ಹೆಚ್ಚಳವಾಗಿದ್ದರೂ ಜನರು ಹಬ್ಬದ ಆಚರಣೆಗೆ ಅತ್ಯಗತ್ಯವಾಗಿರುವ ವಸ್ತುಗಳ ಖರೀದಿ ನಡೆಸಿದರು.