ಚಾಮರಾಜನಗರ: ಅಪಾರ ಭಕ್ತಿಯಿಂದ ರಾಘವೇಂದ್ರ ಸ್ವಾಮಿಗಳು ಆರಾಧನೆ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಹರಕೆ ತೀರಿಸಲು ಮಂತ್ರಾಲಯಕ್ಕೆ ತೆರಳಿ ನಿಗೂಢವಾಗಿ ನಾಪತ್ತೆಯಾಗಿರುವ ಘಟನೆ ನಡೆದಿದೆ.
ಚಾಮರಾಜನಗರದ ಗಾಳಿಪುರ ಬಡಾವಣೆಯ ನಿವಾಸಿ ದೊರೆಸ್ವಾಮಿ (55) ನಾಪತ್ತೆಯಾದವರು. ಕೂಲಿ ಕೆಲಸ ಮಾಡಿಕೊಂಡಿದ್ದರೂ ಪ್ರತಿ ಗುರುವಾರ ತಪ್ಪದೇ ರಾಯರ ಪೂಜೆ ಮಾಡುತ್ತಿದ್ದ ಅವರು, ಜೀವನದಲ್ಲಿ ಒಮ್ಮೆಯಾದರೂ ಮಂತ್ರಾಲಯಕ್ಕೆ ತೆರಳಿ ಮುಡಿ ಕೊಟ್ಟು ದರ್ಶನ ಪಡೆಯಬೇಕೆಂಬ ಕನಸನ್ನು ಹೊಂದಿದ್ದರು. ಫೆಬ್ರವರಿ 9ರಂದು ಚಾಮರಾಜನಗರದಿಂದ ರೈಲಿನಲ್ಲಿ ಮಂತ್ರಾಲಯಕ್ಕೆ ತೆರಳಿದ್ದ ದೊರೆಸ್ವಾಮಿಗೆ, ಪುತ್ರ ತೇಜಸ್ ಸ್ವತಃ ಟಿಕೆಟ್ ತೆಗೆಸಿಕೊಟ್ಟು 2 ಸಾವಿರ ರೂಪಾಯಿ ಖರ್ಚು ಹಣ ನೀಡಿ ಕಳುಹಿಸಿಕೊಟ್ಟಿದ್ದರು.
“ಮೂರು ದಿನಗಳಲ್ಲಿ ವಾಪಸ್ ಬರುತ್ತೇನೆ” ಎಂದು ಹೇಳಿ ಹೋದವರು ಫೆಬ್ರವರಿ 28 ಕಳೆದರೂ ಮನೆಗೆ ಮರಳಿಲ್ಲ. ಮೊಬೈಲ್ ಫೋನ್ ಬಳಸದ ಕಾರಣ ಕುಟುಂಬಸ್ಥರಿಗೆ ಸಂಪರ್ಕ ಸಾಧ್ಯವಾಗಿಲ್ಲ. ಅವರ ಸುಳಿವು ಸಿಗದ ಹಿನ್ನೆಲೆಯಲ್ಲಿ ಪತ್ನಿ ರೇಖಾ ಹಾಗೂ ಪುತ್ರ ತೇಜಸ್ ಮಂತ್ರಾಲಯಕ್ಕೆ ತೆರಳಿ ರೈಲ್ವೆ ನಿಲ್ದಾಣ ಹಾಗೂ ಮಠದ ಸುತ್ತಮುತ್ತ ಹುಡುಕಾಟ ನಡೆಸಿ ಆರ್ಪಿಎಫ್ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಈ ಕುರಿತು ಚಾಮರಾಜನಗರ ಟೌನ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ.



