ಮಡಿಕೇರಿ:- ಜಿಲ್ಲೆಯ ವಿರಾಜಪೇಟೆ ತಾಲೂಕಿನ ಅಭ್ಯತ್ ಮಂಗಲ ಗ್ರಾಮದಲ್ಲಿ ಅಣ್ಣನೇ ತಮ್ಮನಿಗೆ ಗುಂಡು ಹಾರಿಸಿ ಕೊಲೆಗೈದಿರುವ ಘಟನೆ ಜರುಗಿದೆ. ಆಸ್ತಿ ವಿಚಾರವಾಗಿ ನಡೆದ ಕಲಹ ಕೊಲೆಯಲ್ಲಿ ಅಂತ್ಯವಾಗಿದೆ. 53 ವರ್ಷದ ಕೊಳಂಬೆ ವಿನು ಬೆಳ್ಯಪ್ಪ ಮೃತ ದುರ್ದೈವಿ. ನಂಜರಾಯಪಟ್ಟಣದಲ್ಲಿ ವಾಸವಾಗಿದ್ದ ಬೆಳೆಗಾರ ಕೊಳಂಬೆ ವಿನು, ಅಭ್ಯತ್ ಮಂಗಲದಲ್ಲಿ ಹೊಂದಿರುವ ತೋಟದ ಗೋದಾಮಿನಲ್ಲಿ ಪೈಪುಗಳ ಪರಿಶೀಲನೆಗೆ ತೆರಳಿದ ಸಂದರ್ಭ ಸಹೋದರ ಮಣಿ ಹಿಂದಿನಿಂದ ಬಂದು ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ.
ಆರೋಪಿ ಮಣಿ ಪರಾರಿಯಾಗಲು ಯತ್ನಿಸಿದ್ದು, ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ. ಅಣ್ಣ-ತಮ್ಮನ ನಡುವೆ ಹಲವು ದಿನಗಳಿಂದ ಆಸ್ತಿ ವಿಚಾರಕ್ಕೆ ಗಲಾಟೆ ನಡೆಯುತ್ತಿತ್ತು ಎಂದು ಹೇಳಲಾಗಿದೆ. ಘಟನೆ ಸಂಬಂಧಿಸಿದಂತೆ ಸ್ಥಳಕ್ಕೆ ಮಡಿಕೇರಿ ಗ್ರಾಮಾಂತರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.



