ಬಳ್ಳಾರಿ:- ಅನ್ನಭಾಗ್ಯ ಯೋಜನೆಯ, ಪಡಿತರ ಅಕ್ಕಿಗೆ ನ್ಯಾಯ ಬೆಲೆಯ ಅಂಗಡಿಯ ಮಾಲಿಕರೆ ಕನ್ನ ಹಾಕಿರುವ ಘಟನೆ ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ನಡೆದಿದೆ.
ಬಡವರ ಹೊಟ್ಟೆ ತುಂಬಿಸುವ ಸಲುವಾಗಿ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದರೆ, ಇತ್ತ ಕಡೆ ಬಡವರಿಗೆ ತಲುಪುವ ಮಾರ್ಗದಲ್ಲಿಯೇ ಸೋರಿಕೆಯ ಮಾರ್ಗಗಳು ಬೆಳಕಿಗೆ ಬಂದಿವೆ. ಈ ಕುರಿತು ಒಂದು ಸ್ಟೋರಿಯನ್ನು ನೋಡೋಣ ಬನ್ನಿ.
• ನ್ಯಾಯ ಬೆಲೆ ಅಂಗಡಿಯ ಮಾಲೀಕರಿಂದಲೇ ಪಡಿತರದಾರರಿಗೆ ಮೋಸ,
• ಕಣ್ಮುಚಿ ಕುಳಿತ ಆಹಾರ ಇಲಾಖೆಯ ಅಧಿಕಾರಿಗಳು,
• ತಕ್ಕಡಿಯ ಅಳತೆಯಲ್ಲಿ ಗೋಲ್ ಮಾಲ್,
• 5 ಕೆಜಿ ತೂಕಕ್ಕೆ 4 ಕೆಜಿ ಅಕ್ಕಿ ವಿತರಣೆ,
• ಪಡಿತರದಾರರಿಂದ ತೀವ್ರ ವೀರೋಧ,
ರಾಜ್ಯದ ಜನರು ಯಾರು ಸಹ ಹಸಿವುನಿಂದ ಬಳಲಬಾರದು ಎಂದು ರಾಜ್ಯ ಸರ್ಕಾರ ಜಾರಿಗೆ ತಂದ ಈ ಅನ್ನಭಾಗ್ಯ ಯೋಜನೆಯ ಅಕ್ಕಿಗೆ ಕಳ್ಳಾರ ಕಾಟ ಹೆಚ್ಚಾಗಿದೆ. ಇಲ್ಲಿಯವರಗೆ ಕೇವಲ ಹೊರಗಿನ ಕಳ್ಳರನ್ನು ಮಾತ್ರ ನೋಡಿದ್ದು ಉಂಟು. ಆದರೆ ಗಣಿನಾಡು ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಡಿ.ಅಂತಪುರ ಗ್ರಾಮದಲ್ಲಿ ನ್ಯಾಯ ಬೆಲೆ ಅಂಗಡಿಯ ಮಾಲಿಕರೆ ತಕ್ಕಡಿಯ ತೂಕದ ಅಳತೆಯಲ್ಲಿ ಗೋಲ್ ಮಾಲ್ ಮಾಡುವ ಮುಖಾಂತರ ಗ್ರಾಹಕರ ಕಣ್ಣಿಗೆ ಮಣ್ಣೆರಚುವ ಕಾರ್ಯಮಾಡಿದ್ದಾರೆ.
ಈ ಮೂಲಕ ಬೆಲಿಯೇ ಎದ್ದು ಹೊಲ ಮೈಯುವ ಕೆಲಸವಾಗಿದೆ ಎಂದು ಗ್ರಾಹಕರು ಹಿಡಿಶಾಪ ಹಾಕುತ್ತಿದ್ದಾರೆ.
ಎರಡು ದಿನಗಳಿಂದ ಗ್ರಾಹಕರಿಗೆ ಅಕ್ಕಿ ವಿತರಿಸುವ ಕಾರ್ಯ ಡಿ.ಅಂತಪುರ ಗ್ರಾಮದ ನ್ಯಾಯ ಬೆಲೆ ಅಂಗಡಿಯ ಮಾಲಿಕ ಮಾಡುತ್ತಿದ್ದು, ಡಿಜಿಟಲ್ ತೂಕದ ತಕ್ಕಡಿಯ ಮೂಲಕ ಗ್ರಾಹಕರಿಗೆ ವಿತರಿಸುವ ಕಾರ್ಯ ನಡೆಯುತಿತ್ತು. ಪ್ರತಿ ಗ್ರಾಹಕರಿಗೆ 5KG ತೂಕದಂತೆ ನೀಡುವ ಕಾರ್ಯ ಮಾಡಬೇಕಿತ್ತು. ಆದರೆ ಅದೇ ಅಕ್ಕಿಯನ್ನು ಬೇರೆ ಕಡೆ ತೂಕ ಮಾಡಿದಾಗ ಕೇವಲ 4 KG ಮಾತ್ರ ವಿತರಣೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ತಕ್ಕಡಿಯ ತೂಕದಲ್ಲಿ ಗೋಲ್‌ಮಾಲ್ ಮಾಡುವ ಮೂಲಕ ಪ್ರತಿಯೊಬ್ಬ ಗ್ರಾಹಕನ ಕಡೆಯಿಂದ 1 KG ಅಕ್ಕಿಯನ್ನು ಕದಿಯುವ ಕಾರ್ಯ ಮಾಡಲಾಗಿದೆ ಎಂದು ಗಂಭೀರ ಆರೋಪ ಪಡಿತರದಾರರಿಂದ ಕೇಳಿಬಂದಿದೆ. ಈ ಮೂಲಕ ಗ್ರಾಹಕರ ಹೊಟ್ಟೆ ಹೊಡೆಯುವ ಕಾರ್ಯವನ್ನು ನ್ಯಾಯಬೆಲೆ ಅಂಗಡಿಯ ಮಾಲಿಕ ಮಾಡಿದ್ದಾನೆ. ಈ ಕುರಿತು ನಿಗಾವಹಿಸಿದ ಗ್ರಾಹಕರು ಸ್ಥಳದಲ್ಲಿಯೇ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ದೂರು ದಾಖಲಿಸಲು ಮುಂದಾಗಿದ್ದಾರೆ.
ಈ ರೀತಿಯ ಆರೋಪಗಳು ಜಿಲ್ಲೆಯಾದ್ಯಾಂತ ಆಗಾಗ ಕೇಳಿ ಬರುತ್ತಿವೆ. ಸರ್ಕಾರ ಈ ರೀತಿಯ ಆರೋಪ ಕೇಳಿಬಂದ ನ್ಯಾಯ ಬೆಲೆ ಅಂಗಡಿಗಳ ಪರವಾನಿಗೆಯನ್ನು ಕೂಡಲೇ ರದ್ದುಪಡಿಸಿ, ಬ್ಲಾಕ್ ಲಿಸ್ಟ್ ಗೆ ಹಾಕಬೇಕು ಎಂದು ಸಾರ್ವಜನಿಕರು ಜಿಲ್ಲಾಡಳಿತವನ್ನು ಒತ್ತಾಯಿಸುತ್ತಿದ್ದಾರೆ.
ಆಗ ಮಾತ್ರ ಈ ರೀತಿಯ ಘಟನೆಗಳು ಮರುಕಳಿಸದಂತೆ ತಡೆಯಬಹುದು ಎಂಬುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ. ಈ ಕುರಿತು ಜಿಲ್ಲಾಡಳಿತ ಯಾವ ಕ್ರಮ ಕೈಗೊಳ್ಳುವುದೋ ಕಾದು ನೋಡಬೇಕಾಗಿದೆ.