ವಿಜಯಸಾಕ್ಷಿ ಸುದ್ದಿ, ಗದಗ: ಜಗತ್ತಿಗೆ ಶಾಂತಿ ಮತ್ತು ಪ್ರೀತಿಯ ಸಂದೇಶ ಸಾರಿದ ಯೇಸು ಕ್ರಿಸ್ತರ ಜನ್ಮದಿನವಾದ ‘ಕ್ರಿಸ್ ಮಸ್’ ಹಬ್ಬವನ್ನು ಗುರುವಾರ ಗದಗ-ಬೆಟಗೇರಿ ಅವಳಿ ನಗರದಲ್ಲಿ ಸಡಗರ- ಸಂಭ್ರಮದಿಂದ ಆಚರಿಸಲಾಯಿತು.
ಹಬ್ಬದ ಅಂಗವಾಗಿ ಗದಗ-ಬೆಟಗೇರಿಯಲ್ಲಿ ಸುಮಾರು ೧೨ ಚರ್ಚ್‌ಗಳಲ್ಲಿ ಬೆಳಗ್ಗೆ ವಿಶೇಷ ಪೂಜೆ ಹಾಗೂ ಸಾಮೂಹಿಕ ಪ್ರಾರ್ಥನೆಗಳು ಜರುಗಿದವು.
ಕ್ರೈಸ್ತ ಬಾಂಧವರು ಹೊಸ ಬಟ್ಟೆ ಧರಿಸಿ, ಕುಟುಂಬ ಸಮೇತ ಚರ್ಚ್‌ಗಳಿಗೆ ಆಗಮಿಸಿ ಪ್ರಾರ್ಥಿಸಿದರು.
ಪ್ರಾರ್ಥನೆಯ ನಂತರ ಕ್ರೈಸ್ತ ಬಾಂಧವರು ಪರಸ್ಪರ ಕೈಕುಲುಕಿ, ಆಲಿಂಗಿಸುವ ಮೂಲಕ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಪರಸ್ಪರ ಸಿಹಿ ಹಂಚುವ ಮೂಲಕ ಸೌಹಾರ್ದತೆ ಮೆರೆದರು. ನಗರದ ಪ್ರಮುಖ ಚರ್ಚ್‌ಗಳ ಆವರಣದಲ್ಲಿ ಯೇಸುವಿನ ಜನನದ ದೃಶ್ಯವನ್ನು ಬಿಂಬಿಸುವ ‘ಗೋದಲಿಕಟ್ಟೆ’ ನೋಡುಗರ ಗಮನ ಸೆಳೆಯಿತು. ಕ್ರಿಸ್ ಮಸ್ ಹಬ್ಬದ ಅಂಗವಾಗಿ ಚರ್ಚ್‌ಗಳನ್ನು ವಿದ್ಯುತ್ ದೀಪಾಲಂಕಾರ ಹಾಗೂ ಕ್ರಿಸ್ ಮಸ್ ಟ್ರೀಗಳಿಂದ ಆಕರ್ಷಕವಾಗಿ ಅಲಂಕರಿಸಲಾಗಿತ್ತು.
ಸಾಂತಾಕ್ಲಾಸ್ ವೇಷಧಾರಿಗಳು ಮಕ್ಕಳಿಗೆ ಉಡುಗೊರೆ ನೀಡಿ ಸಂಭ್ರಮಿಸಿದರು.
ಬೆಟಗೇರಿಯ ಸೇಂಟ್ ಇಗ್ನೇಷಿಯಸ್ ಚರ್ಚ್ ಮತ್ತು ವರ್ಥ್ ಮೆಮೋರಿಯಲ್ ಚರ್ಚ್ ನಲ್ಲಿ ಕ್ರಿಸ್ ಮಸ್ ಅಂಗವಾಗಿ ನಡೆದ ವಿಶೇಷ ಸಾಮೂಹಿಕ ಪ್ರಾರ್ಥನೆಯಲ್ಲಿ ಸಚಿವ ಬೆಚ್ ಕೆ ಪಾಟೀಲ್ ಭಾಗಿಯಾಗಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಜಗತ್ತಿನಲ್ಲಿ ಇಂದು ವಿಕೃತ ಮನಸ್ಸುಗಳಿಂದಾಗಿ ಶಾಂತಿ, ಪ್ರೀತಿ ಮತ್ತು ಭಾತೃತ್ವಕ್ಕೆ ಧಕ್ಕೆ ಬರುತ್ತಿರುವ ಸಂದರ್ಭದಲ್ಲಿ, ಯೇಸು ಕ್ರಿಸ್ತರ ಶಾಂತಿ ಸಂದೇಶಗಳ ಅನಿವಾರ್ಯತೆ ಹಿಂದಿಗಿಂತಲೂ ಹೆಚ್ಚಾಗಿದೆ. ಕರ್ನಾಟಕವು ಸರ್ವ ಜನಾಂಗದ ಶಾಂತಿಯ ತೋಟವಾಗಿದೆ. ಇಲ್ಲಿ ಎಲ್ಲ ಧರ್ಮದವರೂ ಸಮನ್ವಯದಿಂದ ಬಾಳುತ್ತಿದ್ದಾರೆ. ಯೇಸುವಿನ ಕೃಪೆಯಿಂದ ನಾಡಿನಲ್ಲಿ ಶಾಂತಿ ಮತ್ತು ಪ್ರೀತಿ ಸದಾಕಾಲ ನೆಲೆಸಲಿ. ಕ್ರಿಸ್ತರ ಸಂದೇಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ನಿಜವಾದ ಶಾಂತಿ ಸ್ಥಾಪನೆ ಸಾಧ್ಯವಾಗಲಿದೆ ಎಂದು ಅಭಿಪ್ರಾಯಪಟ್ಟರು.



