ಹಾಸನ:- ಕೌಟುಂಬಿಕ ಕಲಹದಿಂದ ಬೇಸತ್ತು ಹೋಗಿದ್ದ ಗೃಹಿಣಿಯೋರ್ವರು ನೇಣಿಗೆ ಕೊರಳೊಡ್ಡಿರುವ ಘಟನೆ ಜಿಲ್ಲೆಯ ಬೇಲೂರು ತಾಲೂಕಿನ ಲಿಂಗಾಪುರ ಗ್ರಾಮದಲ್ಲಿ ಜರುಗಿದೆ.
40 ವರ್ಷದ ಹರಿಣಾಕ್ಷಿ ಆತ್ಮಹತ್ಯೆಗೆ ಶರಣಾದ ಮಹಿಳೆ. ಲಿಂಗಾಪುರ ಗ್ರಾಮದ ಶೇಖರ್ ಜೊತೆ ಕಳೆದ 16 ವರ್ಷಗಳ ಹಿಂದೆ ಮೃತ ಹರಿಣಾಕ್ಷಿ ವಿವಾಹವಾಗಿದ್ದರು. ಪತಿ ತನ್ನ ಪತ್ನಿಯನ್ನು ಸದಾ ಅನುಮಾನದಿಂದ ನೋಡುತ್ತಿದ್ದ. ಇದೇ ವಿಚಾರಕ್ಕೆ ದಂಪತಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಎರಡೂ ಕುಟುಂಬಗಳ ಹಿರಿಯರು ಹಲವು ಬಾರಿ ರಾಜಿ ಸಂಧಾನ ಕೂಡ ಮಾಡಿದ್ದರು. ಆದರೂ ಪತಿ-ಪತ್ನಿ ನಡುವೆ ಜಗಳ ನಡೆಯುತ್ತಲೇ ಇತ್ತು.
ಇದರಿಂದ ಮನನೊಂದಿದ್ದ ಹರಿಣಾಕ್ಷಿ ಮನೆಯಲ್ಲಿಯೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.



