ಮಡಿಕೇರಿ:- ಕೋಳಿ ಕಾಲು ಸುಡದಿದ್ದಕ್ಕೆ ಬಾಮೈದುನನ ಕತ್ತು ಕತ್ತರಿಸಿ ಬಾವ ಕೊಲೆಗೈದಿರುವ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಕದೆಮುಳ್ಳೂರು ತೋರ ಗ್ರಾಮದಲ್ಲಿ ಜರುಗಿದೆ.
ಮಂಜು ಮೃತ ದುರ್ದೈವಿ. ಅಭಿ ಕೊಲೆ ಮಾಡಿದ ಆರೋಪಿ. ಮೃತ ಮಂಜು ತೋರ ಗ್ರಾಮದ ತೋಟದ ಅಚ್ಚಯ್ಯ ಎಂಬವರ ಲೈನ್ ಮನೆಯಲ್ಲಿ ವಾಸವಿದ್ದ. ಮೃತ ಮಂಜು ತಂಗಿ ಕಾವ್ಯಳನ್ನು ಆರೋಪಿ ಅಭಿ ವಿವಾಹವಾಗಿದ್ದ. ಜ.07 ಮಂಗಳವಾರದಂದು ತೋಟದ ಕಾರ್ಮಿಕರಿಗೆ ಮುಂಗಡ ಸಂಬಳವನ್ನು ನೀಡಲಾಗಿತ್ತು. ಅಂದು ಸಂಜೆ ಮಂಜು ಮತ್ತು ಅರೋಪಿ ಅಭಿ ಕಂಠಪೂರ್ತಿ ಮದ್ಯ ಸೇವನೆ ಮಾಡಿದ್ದರು. ತೋಟದ ಮಾಲೀಕರ ನಿರ್ದೇಶನದ ಮೇರೆಗೆ ರಾತ್ರಿ ಕಾಫಿ ಕಣದಲ್ಲಿ ಕಾವಲು ಕಾಯುವಂತೆ ತಿಳಿಸಿದ್ದರು. ಈ ವೇಳೆ ಕಾಫಿ ಕಣದಲ್ಲಿ ಕೋಳಿ ಕಾಲು ಸುಡಲು ಇಬ್ಬರು ಮುಂದಾಗಿದ್ದರು. ಆರೋಪಿ ಮೃತ ಮಂಜುಗೆ ನೀನು ಕೋಳಿ ಕಾಲು ಸುಡು, ನಾನು ಮನೆಯಿಂದ ಇಬ್ಬರಿಗೂ ಊಟ ತರುತ್ತೇನೆ ಎಂದು ತಿಳಿಸಿ ಸ್ಥಳದಿಂದ ತೆರಳಿದ್ದ.
ಮನೆಯಿಂದ ಅಭಿ ಹಿಂದಿರುಗಿದಾಗ ಮಂಜು ಕೋಳಿ ಕಾಲು ಸುಡದೆ ಏಕಾಂತದಲ್ಲಿ ಕುಳಿತಿದ್ದ. ಇದನ್ನು ಕಂಡು ಕೋಪಗೊಂಡ ಅಭಿ ಜಗಳಕ್ಕೆ ಮುಂದಾಗಿದ್ದ. ಈ ವೇಳೆ ಮಾತು ಬೆಳೆದು ಜಗಳ ತಾರಕಕ್ಕೇರಿದೆ. ತನ್ನ ಬಳಿಯಿದ್ದ ಕತ್ತಿಯಿಂದ ಆರೋಪಿ ಮಂಜುವಿನ ತಲೆ ಭಾಗವನ್ನು ಕತ್ತರಿಸಿ ಕೊಲೆ ಮಾಡಿದ್ದಾನೆ. ಪರಿಣಾಮ ಅಧಿಕ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಮೃತ ಮನೆಯವರ ದೂರಿನ ಮೇರೆಗೆ ತನಿಖೆ ಕೈಗೊಂಡ ಪೊಲೀಸರಿಗೆ ಬಾವನ ಕೃತ್ಯ ಬಯಲಾಗಿದೆ.