ತುಮಕೂರು:- ಸರ್ಕಾರಿ ಅಧಿಕಾರಿ ಓರ್ವ ರಾಜಕಾರಣಿಯಂತೆ ಆಡಂಬರದ ಜನ್ಮದಿನ ಆಚರಿಸಿಕೊಂಡ ಘಟನೆ ತುಮಕೂರು ಜಿಲ್ಲೆಯ ಶಿರಾ ನಗರದಲ್ಲಿ ಜರುಗಿದೆ.
ಗೃಹಸಚಿವ ಡಾ.ಜಿ.ಪರಮೇಶ್ವರ್ ರವರ ವಿಶೇಷ ಕರ್ತವ್ಯಾಧಿಕಾರಿಯಾಗಿರುವ ನಾಗಣ್ಣ ಅವರು, ಸರ್ಕಾರಿ ಅಧಿಕಾರಿಯಾಗಿರುವಾಗಲೇ ರಾಜಕಾರಣಿಯಂತೆ ಪೋಸ್ ಕೊಟ್ಟಿದ್ದಾರೆ. ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರರ ಶಿರಾ ಕ್ಷೇತ್ರದಲ್ಲಿ ಬರ್ತಡೇ ಸೆಲಬ್ರೇಷನ್ ಜೋರಾಗಿ ನಡೆದಿದ್ದು, ಶಿರಾ ನಗರದ ತುಂಬಾ ಡಾ.ಕೆ.ನಾಗಣ್ಣ ಹುಟ್ಟುಹಬ್ಬದ ಫ್ಲಕ್ಸ್ ಗಳು ರಾರಾಜಿಸಿದೆ.
ಇನ್ನೂ ವಿಶೇಷ ಕರ್ತವ್ಯಾಧಿಕಾರಿಯು, ರಾಜಕಾರಣಿಗಳಂತೆ ಆಡಂಬರದ ಜನ್ಮದಿನಾಚರಣೆ ಘೀಳಿಗೆ ಬಿದ್ರಾ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಶಿರಾದ ಮುಂದಿನ ಕಾಂಗ್ರೆಸ್ ಅಭ್ಯರ್ಥಿ ಎಂದು ಬಿಂಬಿಸಲು ನಾಗಣ್ಣ ಹೊರಟಿದ್ದು, ಸರ್ಕಾರಿ ನಿಯಮಾವಳಿಗಳನ್ನು ಗಾಳಿಗೆ ತೂರಿ ಸರ್ಕಾರಿ ಫ್ಲೆಕ್ಸ್ ಹಾಕಿಸಿಕೊಂಡಿರುವುದು ಎಲ್ಲೆಡೆ ಆಕ್ರೋಶಕ್ಕೆ ಕಾರಣವಾಗಿದೆ.
ಪಶು ಇಲಾಖೆಯಲ್ಲಿ ನಾಗಣ್ಣ ಕಾರ್ಯ ನಿರ್ವಹಿಸುತ್ತಿದ್ದು, ಇತ್ತೀಚಿಗೆ ಗೃಹ ಸಚಿವರ ವಿಶೇಷ ಕರ್ತವ್ಯಾಧಿಕಾರಿಯಾಗಿ ನಿಯೋಜನೆಗೊಂಡಿದ್ದರು. ಹುಟ್ಟು ಹಬ್ಬದ ಫ್ಲೆಕ್ಸ್ ಗಳಲ್ಲಿ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಕಾಂಗ್ರೆಸ್ ನಾಯಕರ ಭಾವಚಿತ್ರ ಹಾಗೂ ಪಕ್ಷದ ಚಿಹ್ನೆ ಬಳಕೆ ಮಾಡಿದ್ದಾರೆ.
ಇನ್ನೂ ಸರ್ಕಾರಿ ಅಧಿಕಾರಿಗಳಿಗೆ ಬೆಂಬಲ ಸೂಚಿಸುವ ಫ್ಲೆಕ್ಸ್ ಬ್ಯಾನರ್‌ಗಳು ಸಾರ್ವಜನಿಕ ಸ್ಥಳಗಳಲ್ಲಿ ನಿಷಿದ್ಧ ಮಾಡಲಾಗಿದೆ. ಆದರೂ ಇದಕ್ಕೆ ಡೋಂಟ್ ಕೇರ್ ಎಂದಿರುವ ಅಧಿಕಾರಿ ಆಶಿಸ್ತು ನಡೆ ತೋರಿದ್ದಾರೆ. ಅಭಿಮಾನಿಗಳ ಹೆಸರಲ್ಲಿ ತಾವೇ ಫ್ಲೆಕ್ಸ್ ವೆಚ್ಚ ಬರಿಸಿ ಹಾಕಿಸಿಕೊಂಡ ಆರೋಪ ಕೇಳಿ ಬಂದಿದೆ.
ಗೃಹ ಸಚಿವರ ವಿಶೇಷ ಕರ್ತವ್ಯಾಧಿಕಾರಿ ವಿರುದ್ದ ಕ್ರಮಕ್ಕೆ ಒತ್ತಾಯ ಮಾಡಲಾಗಿದೆ. ಘಟನೆ ಸಂಬಂಧ ಮಧುಗಿರಿ ಮೂಲದ ಆರ್‌ಟಿಐ ಕಾರ್ಯಕರ್ತ ಶಿವಣ್ಣ ಪತ್ರದ ಮೂಲಕ ರಾಜ್ಯಪಾಲರು, ಸಿಎಂ, ಡಿಸಿಎಂ ಹಾಗೂ ಗೃಹಸಚಿವರಿಗೆ ದೂರು ನೀಡಿದ್ದಾರೆ.
ಅಷ್ಟೇ ಅಲ್ಲದೇ ಸರ್ಕಾರದ ಮುಖ್ಯಕಾರ್ಯದರ್ಶಿ, ಲೋಕಾಯುಕ್ತ ಹಾಗೂ ಜಿಲ್ಲಾಧಿಕಾರಿಗೆ ದೂರಿನ ಪ್ರತಿ ರವಾನೆ ಮಾಡಿದ್ದಾರೆ. ಹುಟ್ಟು ಹಬ್ಬ ಆಚರಣೆ ಸಂಭ್ರಮಾಚರಣೆಗಳು ಓಕೆ, ರಾಜಕಾರಣಿಗಳ ಪೋಟೋ ಬಳಸಿ ಫ್ಲೆಕ್ಸ್ ಹಾಕಿಸಿ ಕೊಂಡಿದ್ದು ಯಾಕೆ..? ಎಂಬ ಪ್ರಶ್ನೆ ಎಲ್ಲೆಡೆ ಎದ್ದಿದೆ. ಕಳೆದ ನ.9 ರಂದು ಹುಟ್ಟುಹಬ್ಬ ಆಚರಿಸಿಕೊಂಡಿದ್ದ ಪೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.