ಅಪರಾಧಿಗಳ ರಕ್ಷಣೆಗೆ ನಿಂತ ಸರ್ಕಾರ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯದಲ್ಲಿ ಕ್ರಿಮಿನಲ್‌ಗಳು, ಭಯೋತ್ಪಾದಕರಿಗೆ ದಂಡನೆ ಕೊಡಬೇಕಾದ ಸರ್ಕಾರ ರಾಜಾಶ್ರಯ ನೀಡಿರುವುದನ್ನು ನೋಡಿದರೆ ರಾಜ್ಯದಲ್ಲಿ ಗೃಹ ಇಲಾಖೆ ಜನಪರ ಕಾರ್ಯ ಬಿಟ್ಟು ಅಪರಾಧಿಗಳ ರಕ್ಷಣೆಗೆ ನಿಂತಿದೆಯೋ ಎಂಬ ಪ್ರಶ್ನೆ ಪ್ರಜ್ಞಾವಂತ ನಾಗರಿಕ ಸಮಾಜದಲ್ಲಿ ಎದ್ದಿದ್ದು, ಈ ಪ್ರಕರಣವನ್ನು ಎನ್‌ಐಎಗೆ ಒಪ್ಪಿಸಬೇಕೆಂದು ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ ಅಕ್ಕಿ ಆಗ್ರಹಿಸಿದ್ದಾರೆ.

Advertisement

ಈ ಕುರಿತು ಹೇಳಿಕೆ ನೀಡಿರುವ ಅವರು, ಅಪರಾಧಿಗಳು ಐಷಾರಾಮಿ ಹೊಟೇಲ್‌ಗಳಿಗೆ ಹೋಗಬೇಕಾದ ಅವಶ್ಯಕತೆ ಇಲ್ಲ, ಜೈಲಿಗೆ ಹೋದರೆ ಸಾಕು. ಅಲ್ಲಿ ಎಲ್ಲವೂ ಸಿಗುತ್ತದೆ. ಭಯೋತ್ಪಾದಕನ ಕೈಗೆ ಮೊಬೈಲ್ ಸಿಗುವುದಾದರೆ, ದೇಶದ್ರೋಹದ ಚಟುವಟಿಕೆಗೆ ರಾಜಾಶ್ರಯ ನೀಡಿದಂತಾಗಿದೆ. ಇದು ರಾಜ್ಯದ ಜನತೆಗೆ ಮತ್ತು ಭಯೋತ್ಪಾದಕ ಕೃತ್ಯಗಳಲ್ಲಿ ವೀರ ಮರಣ ಹೊಂದಿದ ಹುತಾತ್ಮ ಯೋಧರಿಗೆ ಮತ್ತು ಪ್ರಾಣತೆತ್ತ ಪ್ರಜೆಗಳಿಗೆ ಮಾಡಿದ ಅನ್ಯಾಯವಾಗಿದೆ.

ಮುಖ್ಯಮಂತ್ರಿಗಳ ತವರು ಜಿಲ್ಲೆ ಮೈಸೂರಿನಲ್ಲಿ ಮಾದಕವಸ್ತು ಉತ್ಪಾದನಾ ಕಾರ್ಖಾನೆ ಆರಂಭವಾಗುತ್ತದೆ. ಕರ್ನಾಟಕದವರಿಗೆ ಮಾಹಿತಿಯೇ ಇಲ್ಲ, ಮಹಾರಾಷ್ಟ್ರ ಪೊಲೀಸರು ಬಂದು ಹಿಡಿಯುತ್ತಾರೆ. ಇದಕ್ಕೆ ರಾಜಾಶ್ರಯವೇ ಕಾರಣ ಎಂದು ದೂರಿದ್ದಾರೆ.

ರಾಜ್ಯದ ಜೈಲಿನ ಇಂಥ ಚಟುವಟಿಕೆಗಳ ಕುರಿತು ಎನ್‌ಐಎ ಇಲ್ಲಿನ ಬೇಹುಗಾರಿಕಾ ದಳಕ್ಕೆ 4 ತಿಂಗಳ ಹಿಂದೆ ಎಚ್ಚರಿಕೆ ಕೊಟ್ಟಿತ್ತು. ಆದರೂ, ನಿರ್ಲಕ್ಷ್ಯ ವಹಿಸಿರುವುದು ಸರ್ಕಾರದ ಕೃಪೆಯಾಗಿದೆ. ಆ ಕೃಪೆಗೆ ಸಿಎಂ, ಗೃಹ ಸಚಿವರು ಹೊಣೆ ಹೊತ್ತುಕೊಳ್ಳಬೇಕು. ಆದ್ದರಿಂದ ಮುಖ್ಯಮಂತ್ರಿ, ಗೃಹ ಸಚಿವರಿಗೆ ಅಧಿಕಾರದಲ್ಲಿ ಇರುವ ನೈತಿಕತೆ ಇಲ್ಲ. ಅವರು ರಾಜೀನಾಮೆ ಕೊಡಬೇಕು. ಯಾರೋ ಇಬ್ಬರು ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿದರೆ ಪ್ರಕರಣದ ಗಂಭೀರತೆ ಅರ್ಥವಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.


Spread the love

LEAVE A REPLY

Please enter your comment!
Please enter your name here