ನಾಡಿನ ಮನಗೆದ್ದ ಕಲಾವಿದ ಮಾಂತೇಶ ಕರಮಣ್ಣವರ

0
A grand welcome to award winner Mantesh Karamanna in the reality show
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಖಾಸಗಿ ವಾಹಿನಿಯಲ್ಲಿ ನಡೆದ ರಿಯಾಲಿಟಿ ಶೋನಲ್ಲಿ ಹಾಸ್ಯ ಅಭಿನಯದ ಮೂಲಕ ಪ್ರಶಸ್ತಿ ಗಿಟ್ಟಿಸಿಕೊಂಡ ಲಕ್ಷ್ಮೇಶ್ವರ ಮಾಂತೇಶ ಕರಮಣ್ಣವರ ಪ್ರಶಸ್ತಿಯೊಂದಿಗೆ ಲಕ್ಷ್ಮೇಶ್ವರಕ್ಕೆ ಆಗಮಿಸಿದಾಗ ಪಟ್ಟಣದ ವತಿಯಿಂದ ಸ್ವಾಗತಿಸಲಾಯಿತು.

Advertisement

ತನ್ನ ಸ್ವಂತ ಪ್ರಯತ್ನದಿಂದ ಹಾಗೂ ಪ್ರತಿಭೆಯ ಮೂಲಕ ಸಾಧನೆ ಮಾಡಬಹುದು ಎನ್ನುವದನ್ನು ಪಟ್ಟಣದ ಬಡ ಕುಟುಂಬದ ಕುಡಿ ಮಾಂತೇಶ ಕರಮಣ್ಣವರ ಸಾಬೀತು ಮಾಡಿದ್ದಾನೆ. ಪಟ್ಟಣದ ಈ ಯುವ ಪ್ರತಿಭೆ ನಾಡಿನ ಜನಮನ ಗೆದ್ದಿದ್ದಾನೆ.

ಕನ್ನಡ ವಾಹಿನಿಯೊಂದರ ರಿಯಾಲಿಟಿ ಶೋನಲ್ಲಿ ಹಾಸ್ಯದ ನಟನೆ ಮೂಲಕ ಮನೆ ಮಾತಾಗಿದ್ದ ಪಟ್ಟಣದ ಪ್ರತಿಭಾವಂತ ಯುವಕ ಮಾಂತೇಶ ಕರಮಣ್ಣವರ ಭಾಗವಹಿಸಿದ್ದ ನಿರೂಪಕಿ ಅನುಶ್ರಿಯವರ ತಂಡ ಗೆಲುವು ಸಾಧಿಸುವ ಮೂಲಕ ಪಟ್ಟಣದ ಕೀರ್ತಿಯನ್ನು ರಾಜ್ಯಾದ್ಯಂತ ವ್ಯಾಪಿಸಿದ್ದಾನೆ. ಕಲೆ, ಪ್ರತಿಭೆ ಎನ್ನುವದು ಯಾರ ಸ್ವತ್ತಲ್ಲ ಎನ್ನುವದಕ್ಕೆ ಮಾಂತೇಶ ಸಾಕ್ಷಿಯಾಗಿದ್ದು, ಈ ಕಲಾವಿದ ಬಾಲ್ಯದಿಂದಲೂ ಕಡು ಬಡತನದ ನಡುವೆಯೇ ಪರಿಪಕ್ವ ಕಲಾವಿದನಾಗಿದ್ದಾನೆ.

ಪಟ್ಟಣದಲ್ಲಿ ಚಿಕ್ಕ ಚಹಾ ಅಂಗಡಿ ನಡೆಸುವ ಮಲ್ಲೇಶಪ್ಪ ಮತ್ತು ಗಂಗವ್ವ ಎನ್ನುವ ದಂಪತಿಗಳ ಪುತ್ರನಾಗಿರುವ ಮಾಂತೇಶ ಚಿಕ್ಕಂದಿನಿಂದಲೇ ಕಲೆಯಲ್ಲಿ ಅಸಕ್ತಿಯಿಂದ ತೊಡಗಿಸಿಕೊಂಡಿದ್ದ. ಹಲವಾರು ಅವಕಾಶಗಳು ಕಾರಣಾಂತರಗಳಿಂದ ತಪ್ಪಿಹೋಗಿದ್ದರೂ ಇದೀಗ ಅವನ ಕಲೆಗೆ ಬೆಲೆ ದೊರಕಿದೆ. ಅದೃಷ್ಟ ಈತನ ಕೈ ಹಿಡಿದಿದ್ದು, ರಾಜ್ಯದ ಜನತೆಯನ್ನು ಹಾಸ್ಯದ ಹೊನಲಲ್ಲಿ ತೇಲಿಸುವ ಮೂಲಕ ಎಲ್ಲರ ಮನ ಗೆದ್ದಿದ್ದಾನೆ.

ಪ್ರಶಸ್ತಿ ವಿಜೇತರಾದ ಮೇಲೆ ಗುರುವಾರ ಪಟ್ಟಣಕ್ಕೆ ಆಗಮಿಸಿ ಮಾಂತೇಶ ಕರಮಣ್ಣವರ, ಕಲಾವಿದರಾದ ಹರೀಶ, ಉಮೇಶ ಕಿನ್ನಾಳ, ಅವರನ್ನು ಇಲ್ಲಿನ ಜನರು ಶಿಗ್ಲಿ ನಾಕಾ ಬಳಿ ಅದ್ದೂರಿಯಾಗಿ ಸ್ವಾಗತಿಸಿದರು. ತಹಸೀಲ್ದಾರ ವಾಸುದೇವ ಸ್ವಾಮಿ, ತಾ.ಪಂ ಇಓ ಕೃಷ್ಣಪ್ಪ ಧರ್ಮರ, ಪಿಎಸ್‌ಐ ಈರಪ್ಪ ರಿತ್ತಿ ಅವರು ಕಲಾವಿದನಿಗೆ ಸತ್ಕರಿಸಿ ಶುಭಹಾರೈಸಿದರು. ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕಲಾವಿದರನ್ನು ತೆರೆದ ವಾಹನದಲ್ಲಿ ಮೆರವಣಿಗೆಯ ಮೂಲಕ ಕರೆತರಲಾಯಿತು.

ಈ ಸಂದರ್ಭದಲ್ಲಿ ತಂದೆ ಮಲ್ಲೇಶಪ್ಪ, ತಾಯಿ ಗಂಗವ್ವ, ವಿ.ಜಿ. ಪಡಗೇರಿ, ಸುನೀಲ ಮಹಾಂತಶೆಟ್ಟರ, ವಿಜಯಕುಮಾರ ಹತ್ತಿಕಾಳ, ವೀರೇಂದ್ರ ಪಾಟೀಲ, ಸೋಮಣ್ಣ ಬೆಟಗೇರಿ, ಬಸಣ್ಣ ಬೆಟಗೇರಿ, ನೀಲಪ್ಪ ಪಡಗೇರಿ, ಸುರೇಶ ಹಟ್ಟಿ, ಹರೀಶ ಲಕ್ಷ್ಮೇಶ್ವರ ಮುಂತಾದವರಿದ್ದರು.

ಕಲಿಸಿದ ಗುರುಗಳು, ತಂದೆ-ತಾಯಿ, ಹಿರಿಯರು ಪ್ರೋತ್ಸಾಹ ಕೊಟ್ಟಿದ್ದರ ಪರಿಣಾಮ ಈ ಹಂತಕ್ಕೆ ಬೆಳೆಯಲು ಸಾಧ್ಯವಾಗಿದೆ. ಗದಗ ಜಿಲ್ಲೆಯಿಂದ ಕನ್ನಡ ಚಿತ್ರರಂಗದಲ್ಲಿ ನಟನಾಗಬೇಕು ಎಂಬ ಆಸೆಯಿದ್ದು, ಎಲ್ಲರ ಆಶೀರ್ವಾದದಿಂದ ಅವಕಾಶ ದೊರೆಯಬೇಕಿದೆ.
– ಮಾಂತೇಶ ಕರಮಣ್ಣವರ.
ವಿಜೇತ ಕಲಾವಿದ.

 


Spread the love

LEAVE A REPLY

Please enter your comment!
Please enter your name here