ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಸುದೀರ್ಘ 24 ವರ್ಷಗಳ ಕಾಲ ಭಾರತ ದೇಶದ ಗಡಿಗಳಲ್ಲಿ ಸೇವೆ ಸಲ್ಲಿಸಿ ತವರಿಗೆ ಮರಳಿದ ಸಮೀಪದ ಯಳವತ್ತಿ ಗ್ರಾಮದ ಯೋಧ ಯಲ್ಲಪ್ಪ ರಾಮಪ್ಪ ಮಡ್ಡಿ ಅವರನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು.
ಇವರು ತಮ್ಮ ಪಿಯುಸಿ ಪೂರೈಸಿದ ನಂತರ 2000ನೇ ಸಾಲಿನಲ್ಲಿ ಮದ್ರಾಸ್ ಇಂಡಿಯನ್ ಆರ್ಮಿ ಗ್ರುಪ್‌ಗೆ ಸೇರಿ, ಅಲ್ಲಿಂದ ಇಲ್ಲಿಯವರೆಗೆ 24 ವರ್ಷಗಳ ಕಾಲ ಭಾರತಾಂಬೆಯ ಸೇವೆ ಮಾಡಿದ್ದಾರೆ. ಸೇವೆಗೆ ಸೇರಿದೆ ಕೂಡಲೇ ಕಾರ್ಗಿಲ್ ಯುದ್ಧದ ಸಲುವಾಗಿ ರಾಜಸ್ಥಾನದ ಕಾರ್ಗಿಲ್ ಲೊಕೇಶನ ಬಾರ್ಡಮಿರ್ ಹಾಗೂ ಗಂಗಾನಗರ ಇವರನ್ನು ಕಳುಹಿಸಲಾಯಿತು. 2017ರಿಂದ 2020ರವರೆಗೆ ಗುಜರಾತನ ಓ.ಎನ್.ಜಿ.ಸಿ ಕ್ಯಾಂಪ್‌ನಲ್ಲಿ ಸಿವಿಲ್ ಸ್ಟಾಪ್ ಟ್ರೈನಿಂಗ್ ಇನ್ಸ್ಟ್ರಕ್ಟರ್ ಆಗಿ ಸೇವೆ ಸಲ್ಲಿಸಿದ್ದಾರೆ. 2020ರಿಂದ 2023ರ ವರೆಗೆ ನಾಗಾಲ್ಯಾಂಡ್‌ನ ದಿಮ್ಮಪುರ್ ಕ್ಯಾಂಪ್‌ಲ್ಲಿ ಇವರನ್ನು ಸೇವೆಗೆ ನಿಯೋಜಿಸಲಾಯಿತು. 2023ರಿಂದ ಸೆಪ್ಟೆಂಬರ್ 2024ರವರೆಗೆ ಇವರು ಸೇವೆ ಸಲ್ಲಿಸಿ ಇದೀಗ ನಿವೃತ್ತಿಯಾಗಿ ತವರೂರಿಗೆ ಮರಳಿದ್ದಾರೆ.
ಯೋಧನನ್ನು ಗ್ರಾಮಸ್ಥರು ಆತ್ಮಿಯವಾಗಿ ಬರಮಾಡಿಕೊಂಡರು. ಗ್ರಾಮಕ್ಕೆ ಆಗಮಿಸಿದ ಸಂದರ್ಭದಲ್ಲಿ ಹಣೆಗೆ ತಿಲಕವನ್ನಿಟ್ಟು ಆರತಿ ಬೆಳಗಿ ಸ್ವಾಗತಿಸಿ, ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಗ್ರಾಮದ ಅರಬಿಂದೋ ಶಾಲೆ, ಜನನಿ ಶಾಲೆ, ಸರಕಾರಿ ಹೆಣ್ಣು ಮಕ್ಕಳ ಶಾಲೆ, ಜಗದ್ಗುರು ಫಕೀರೇಶ್ವರ ಚನ್ನವೀರೇವೇಶ್ವರ ಪ್ರೌಢಶಾಲೆ ಸೇರಿದಂತೆ ನೂರಾರು ಮಕ್ಕಳು ಯೋಧನಿಗೆ ಜಯಕಾರ ಕೂಗುತ್ತಾ, ರಾಷ್ಟçಗೀತೆಯನ್ನು ಹೇಳುತ್ತಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಗ್ರಾಮದ ಸಮಸ್ತ ನಾಗರಿಕರು, ಹಿರಿಯರು, ಮಕ್ಕಳು, ಸ್ನೇಹಿತರ ಬಳಗದವರು ಹಾಜರಿದ್ದರು.