ವಿಜಯಸಾಕ್ಷಿ ಸುದ್ದಿ, ಗದಗ: ಮನುಷ್ಯನ ಅಜ್ಞಾನವನ್ನು ದೂರ ಮಾಡಿ, ಸುಜ್ಞಾನದ ಬೆಳಕು ನೀಡುವ ಮೂಲಕ ಎಲ್ಲರನ್ನು ಧರ್ಮದ ಸನ್ಮಾರ್ಗದಲ್ಲಿ ಮುನ್ನಡೆಸಬಲ್ಲ ಅದಮ್ಯ ಶಕ್ತಿ ಗುರುವಿನಲ್ಲಿ ಇದೆ ಎಂದು ಗದುಗಿನ ಶಿವಾನಂದ ಬೃಹನ್ಮಠದ ಪೂಜ್ಯ ಜ. ಅಭಿನವ ಶಿವಾನಂದ ಮಹಾಸ್ವಾಮಿಗಳು ಹೇಳಿದರು.
ಅವರು ಗುರುವಾರ ಗದಗ ಜಿಲ್ಲಾ ರಡ್ಡಿ ಸಮಾಜ ಸಂಘವು ಗುರುಪೂರ್ಣೆಮೆ ಅಂಗವಾಗಿ ಏರ್ಪಡಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಗುರುವಂದನೆ ಸ್ವೀಕರಿಸಿ ಆಶೀರ್ವಚನ ದಯಪಾಲಿಸಿದರು.
ಎಲ್ಲರ ಜೀವನದಲ್ಲಿ ಗುರುವಿಗೆ ಅತ್ಯಂತ ಮಹತ್ವದ, ಪೂಜ್ಯನೀಯ ಸ್ಥಾನವನ್ನು ನೀಡಲಾಗಿದೆ. ಜನ್ಮ ನೀಡಿದ ತಾಯಿ, ನೆಲೆ ಒದಗಿಸಿದ ಭೂಮಿ ಸ್ವರ್ಗಕ್ಕೂ ಮಿಗಿಲು. ತಾಯಿಯೇ ಮೊದಲ ಗುರು. ಅಂತೆಯೇ ಮಾತೃ ದೇವೋಭವ ಪಿತೃ ದೇವೋಭವ, ಆಚಾರ್ಯ ದೇವೋಭವ ಹಾಗೂ ಅತಿಥಿ ದೇವೋಭವ ಎಂದು ಹೇಳುವ ಮೂಲಕ ಗುರುವಿಗೆ ದೈವೀ ಸ್ವರೂಪ ನೀಡಲಾಗಿದೆ ಎಂದರು.
ಮನುಷ್ಯ ಧರ್ಮದ ಹಾದಿಯಲ್ಲಿ ಮುನ್ನಡೆಯಬೇಕು, ಸತ್ಸಂಗ, ಸಂತರ, ಗುರುವಿನ ಸಂಪರ್ಕದಲ್ಲಿದ್ದರೆ ಅಜ್ಞಾನ ದೂರವಾಗಿ ಸುಜ್ಞಾನವು ಪ್ರಜ್ವಲಿಸುವದು. ನಾವಿಂದು ಮಕ್ಕಳಿಗೆ ಒಳ್ಳೆಯ ಶಿಕ್ಷಣ, ಸಂಸ್ಕಾರ, ಸಂಸ್ಕೃತಿಯನ್ನು ರೂಢಿಸಬೇಕು. ಅವರಲ್ಲಿ ಆಧ್ಯಾತ್ಮಿಕ, ವೈಚಾರಿಕ ಮತ್ತು ಸಾಂಸ್ಕೃತಿಕ ಪ್ರಜ್ಞೆ ಬೆಳೆದು ಬರುವಂತೆ ತಂದೆ-ತಾಯಿ, ಪೋಷಕರು ಮಾಡಬೇಕು ಎಂದು ಪೂಜ್ಯರು ಹೇಳಿದರು.
ಗದಗ ಜಿಲ್ಲಾ ರಡ್ಡಿ ಸಮಾಜ ಸಂಘದ ಹಿರಿಯರು, ಸಮಾಜ ಬಾಂಧವರು, ಮಹಿಳೆಯರು ಸಂಘಟಿತರಾಗಿ ಪೂಜ್ಯ ಜ. ಅಭಿನವ ಶಿವಾನಂದ ಮಹಾಸ್ವಾಮಿಗಳಿಗೆ ಶೃದ್ಧಾಭಕ್ತಿಯೊಂದಿಗೆ ಆರತಿ ಮಾಡಿ, ಗುರುಕಾಣಿಕೆ, ಫಲಪುಷ್ಪಗಳೊಂದಿಗೆ ಗುರುವಂದನೆ ಸಲ್ಲಿಸಿದರು.
ಎಸ್.ಎಚ್. ಶಿವನಗೌಡ್ರ ಸ್ವಾಗತಿಸಿ ನಿರೂಪಿಸಿದರು. ನಿಂಗಪ್ಪ ದೇಸಾಯಿ ಹಾಗೂ ಬಾಬು ಮಲ್ಲನಗೌಡ್ರ ಗುರುಪೂರ್ಣಿಮೆ ಕುರಿತು ಮಾತನಾಡಿದರು. ರಾಘು ಹೊಸಮನಿ ದಂಪತಿಗಳು ಪೂಜ್ಯರ ಪಾದಪೂಜೆ ಮಾಡಿ ಗುರುವಂದನೆ ಸಲ್ಲಿಸಿದರು. ಕೊನೆಗೆ ಮೋಹನ ಕಗದಾಳ ವಂದಿಸಿದರು.
ಮಹಾನ್ ಯೋಗಿ ವೇಮನ್ ಹಾಗೂ ಹೇಮರಡ್ಡಿ ಮಲ್ಲಮ್ಮ ಧರ್ಮ ಜಾಗೃತಿ, ವೈಚಾರಿಕ ಜಾಗೃತಿಯೊಂದಿಗೆ ಮನುಷ್ಯನ ಆದರ್ಶಮಯ ಬದುಕಿಗೆ ಬಹು ದೊಡ್ಡ ಮೌಲಿಕ ಸಾಹಿತ್ಯ, ತತ್ವ ಸಂದೇಶಗಳನ್ನು ನೀಡಿದ್ದಾರೆ. ಅವುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕು. ಅಂದಾಗ ಮಾತ್ರ ನಮ್ಮ ಜೀವನ ಪಾವನ ಆಗಬಲ್ಲದು ಎಂದು ಪೂಜ್ಯ ಜ. ಅಭಿನವ ಶಿವಾನಂದ ಮಹಾಸ್ವಾಮಿಗಳು ಹೇಳಿದರು.