ತನ್ನ ತಾ ಅರಿತವನೇ ಗುರು

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಬಸವಣ್ಣನವರ ಅನುಭವ ಮಂಟಪದಲ್ಲಿ ಮೇಲು, ತಳ ವರ್ಗದ ಶರಣರೆಲ್ಲರ ಮಿಳಿತವಾಗಿತ್ತು. ಅಲ್ಲಿ ನಡೆಯುತ್ತಿದ್ದ ಚಿಂತನ-ಮಂಥನಗಳಿಂದ ಸರ್ವರಲ್ಲೂ ಸಮಾನತ್ವ ಮೂಡಿ ತಳವರ್ಗದ ಶರಣರೂ ಆಧ್ಮಾತ್ಮಿಗಳಾಗಿ ಹೊರಹೊಮ್ಮಿದರು. ಅವರಲ್ಲಿ ಉರಿಲಿಂಗ ಪೆದ್ದಿ ಎನ್ನುವ ಕಳ್ಳತನ ಮಾಡುವಾತನೂ ಬಸವಣ್ಣನವರ ಪ್ರಭಾವಕ್ಕೊಳಗಾಗಿ ಶರಣನಾಗಿ ಬದಲಾಗಿದ್ದ. ಎಂಥ ಪಂಡಿತರೂ ನಿಬ್ಬೆರಗಾಗುವಂತಹ ಅನೇಕ ವಚನಗಳನ್ನು ಆತ ರಚಿಸಿದ್ದಾನೆ ಎಂದು ಅನುಭಾವಿ ನಿಂಗನಗೌಡ ಹಿರೇಸಕ್ಕರಗೌಡರು ನುಡಿದರು.

Advertisement

ಅವರು ಬಸವದಳದ 1653ನೇ ಶರಣ ಸಂಗಮ ಕಾರ್ಯಕ್ರಮದಲ್ಲಿ `ಉರಿಲಿಂಗ ಪೆದ್ದಿ ಶರಣರ ವಚನ’ ಕುರಿತ ಚಿಂತನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇದು ತುಂಬ ದೊಡ್ಡ ವಚನವಾಗಿದ್ದರೂ ಉರಿಲಿಂಗ ಪೆದ್ದಿಯ ವಿಚಾರಶೀಲತೆ, ಜ್ಞಾನದ ಮಿಳಿತ ತತ್ವವೇ ಆಗಿದೆ. ತನ್ನನ್ನು ತಾನು ಯಾರು ಅರಿಯುತ್ತಾರೋ ಅವರೇ ಗುರುವಾಗಬಲ್ಲರು. ಯೋಗವೆಂದರೆ ಬರೀ ಉಸಿರು ತೆಗೆದುಕೊಳ್ಳುವುದು, ನಿಲ್ಲಿಸುವುದು (ಕುಂಭಕ) ಮತ್ತು ಹೊರಗೆ ಉಸಿರು ಚೆಲ್ಲುವುದಲ್ಲ. ಶರಣರು ಇಂಥ ಯೋಗ ತಿರಸ್ಕರಿಸಿದರು. ತನ್ನಲ್ಲಿರುವ ಚೈತನ್ಯವೇ-ಜೀವಾತ್ಮ. ಎಲ್ಲರಲ್ಲಿರುವ, ಎಲ್ಲದರಲ್ಲಿರುವ ಅಂದರೆ ಭೂಮಿ, ನೀರು, ಅಗ್ನಿ, ವಾಯು ಮತ್ತು ಆಕಾಶ ಈ ಪಂಚ ಭೂತಗಳಲ್ಲಿರುವ, ಸಕಲ ಬ್ರಹ್ಮಾಂಡಗಳಿಗೆ ಅನುವಾಗಿರುವ ಚೈತನ್ಯವೇ ಪರಮಾತ್ಮ ಆಗಿದೆ ಎಂದರು.

ಈ ಚೈತನ್ಯದೊಳಗೇ ಎಲ್ಲರ ಚೈತನ್ಯ ಅಡಗಿದೆ. ನಮ್ಮ ಚೈತನ್ಯ ಜೀವಾತ್ಮವಾದರೆ ಎಲ್ಲರ, ಎಲ್ಲವುಗಳ ಚೈತನ್ಯವೇ ಪರಮಾತ್ಮವಾಗಿದೆ. ಪರಮಾತ್ಮಕ್ಕೆ ಪರ್ಯಾವಾದ ಶಬ್ದವೇ ಪರಬ್ರಹ್ಮವಾಗಿದೆ. ನಾನು ನಾನು, ನನ್ನೊಳಗೇ ಮನೆ ಮಾಡಿರುವ ಆಸೆ-ಆಮಿಷಗಳು, ಪಂಚ ಜ್ಞಾನೇಂದ್ರಿಯಗಳ, ಕರ್ಮೇಂದ್ರಿಗಳ, ಕಾಮ-ಕ್ರೋಧ ಮುಂ-ಗಳು, ಅಹಂಕಾರ-ಮಮಕಾರಗಳೆಂಬ ಅಷ್ಟ ಮದಗಳು ನಮ್ಮನ್ನು ಆಳುತ್ತಿರುವುದೇ ಮಾಯಾಸಂಬಂಧವಾಗಿದೆ. ಪರಮ ಸತ್ಯ ಒಂದೇ ಆಗಿದೆ ಎಂದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಶರಣ ಎಸ್.ಎನ್. ಹಕಾರಿ ಗುರುಗಳು ಉರಿಲಿಂಗಪೆದ್ದಿಯ ಕಥೆ ಹೇಳುತ್ತಾ, ಎಲ್ಲರೂ ನಿಜವಾದ ಅರಿವಿನಿಂದ ಬಾಳಬೇಕು. ವಿಶ್ವಗುರು ಬಸವಣ್ಣನವರಾದಿ ಎಲ್ಲ ಶರಣರ ಸದಾಶಯದಂತೆ ನಡೆಯೋಣವೆಂದು ತಿಳಿಸಿದರು.

ಕಾರ್ಯದರ್ಶಿ ಶರಣ ಜಿನಗಾ ಪ್ರಾರ್ಥಿಸಿದರು. ಶರಣೆ ನೀಲಲೋಚನೆ ಹಂಚಿನಾಳ ಶರಣು ಸಮರ್ಪಣೆ ಮಾಡಿದರು. ಶರಣ ರಾಮಣ್ಣ ಕಳ್ಳಿಮನಿ ಕಾರ್ಯಕ್ರಮ ನಿರೂಪಿಸಿದರು.

 ಅತಿಥಿಗಳಾದ ಶರಣ ಶಿವಣ್ಣ ಮುಗದ ಮಾತನಾಡುತ್ತಾ, ನೀರಲ್ಲಿಯೇ ಮೀನು ಇದೆ. ಹಾಗೆಯೇ ಆ ಪರಾತ್ಪರ ವಸ್ತು ಒಂದೇ ಇದೆ. ಅದರೊಳಗೇ ನಾವಿದ್ದೇವೆ. ನಾವು ಯಾರೂ ಬೇರೆ ಬೇರೆ ಅಲ್ಲ. ಎಲ್ಲರೂ ಒಂದೇ ಆಗಿದ್ದೇವೆ. ಅರಿವು ಆಗದ್ದಕ್ಕೆ, ಅಜ್ಞಾನದಲ್ಲಿದ್ದಾಗ ಭಿನ್ನತೆ ಇರುತ್ತದೆ ಎಂದು ಹೇಳಿದರು.


Spread the love

LEAVE A REPLY

Please enter your comment!
Please enter your name here