ಬೆಂಗಳೂರು: ಪ್ರಿಯಕರನ ಸಾಲ ತೀರಿಸೋಕೆ ತಾನೂ ಕೆಲಸ ಮಾಡುತ್ತಿದ್ದ ಮನೆಯಲ್ಲೇ ಮಹಿಳೆಯೋರ್ವಳು ಚಿನ್ನಾಭರಣ ದೋಚಿರುವ ಘಟನೆ ಬೆಂಗಳೂರಿನ ಹೆಣ್ಣೂರು ಪೊಲೀಸ್ ಠಾಣೆ ವ್ಯಾಪ್ತಿಯ ಬಾಬುಸಾಪಾಳ್ಯದಲ್ಲಿ ಜರುಗಿದೆ.
ಪ್ರಮೀಳಾ ಬಂಧಿತ ಆರೋಪಿತೆ. ಆಕೆಯ ಪ್ರಿಯಕರನನ್ನು ಸುಧಾಕರ್ ಎಂದು ಗುರುತಿಸಲಾಗಿದೆ. ಚಿನ್ನಾಭರಣವನ್ನು ಕದ್ದು, ಅದನ್ನು ಮಾರಾಟ ಮಾಡಿದ ಹಣವನ್ನು ಪ್ರಿಯಕರನಿಗೆ ನೀಡಿದ್ದಳು ಎಂದು ತಿಳಿದುಬಂದಿದೆ.
ಪ್ರಮೀಳಾಗೆ ಮದುವೆಯಾಗಿ ಗಂಡ ಬಿಟ್ಟಿದ್ದು, ಪ್ರಿಯಕರನಿಗೆ ಮದುವೆಯಾಗಿ ಎರಡು ಮಕ್ಕಳಿದ್ದವು. ಬೊಮ್ಮನಹಳ್ಳಿಯ ಗಾರ್ಮೆಂಟ್ಸ್ನಲ್ಲಿ ಇಬ್ಬರು ಕೆಲಸ ಮಾಡುವಾಗ ಪರಿಚಯವಾಗಿ ಪ್ರೀತಿಯಾಗಿತ್ತು. ಬಳಿಕ ಅಲ್ಲಿ ಕೆಲಸ ಬಿಟ್ಟು ಖಾಸಗಿ ಅಪಾರ್ಟ್ಮೆಂಟ್‌ನಲ್ಲಿ ಮನೆಕೆಲಸ ಮಾಡುತ್ತಿದ್ದಳು. ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಸುಧಾರಕ್ ಪ್ರಮೀಳಾಗೆ ಸಾಲ ತೀರಿಸೋಕೆ 20 ಸಾವಿರ ರೂ. ಕೇಳಿದ್ದ. ಆಗ ಕೆಲಸ ಮಾಡುತ್ತಿದ್ದ ಮಾಲೀಕರ ಮನೆಯಲ್ಲಿ ಚಿನ್ನಾಭರಣ ಕಳ್ಳತನ ಮಾಡಿ, ಮಾರಾಟ ಮಾಡಿ ಪ್ರಿಯಕರನಿಗೆ ಹಣ ಕೊಟ್ಟಿದ್ದಳು.
ಒಂದು ತಿಂಗಳ ಬಳಿಕ ಮನೆ ಮಾಲೀಕರಿಗೆ ಚಿನ್ನ ಕಳ್ಳತನದ ವಿಷಯ ಗೊತ್ತಾಗಿತ್ತು. ನಂತರ ಹೆಣ್ಣೂರು ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು. ದೂರು ದಾಖಲಿಸಿ ಪೊಲೀಸರು ಮನೆಕೆಲಸದಾಕೆ ವಿಚಾರಣೆ ನಡೆಸಿದ್ದರು. ವಿಚಾರಣೆ ವೇಳೆ ಅರೋಪಿತೆ ಕಳ್ಳತನ ಮಾಡಿರುವುದಾಗಿ ಬಾಯಿಬಿಟ್ಟಿದ್ದಾಳೆ.
ಇದೀಗ ಆರೋಪಿತೆಯಿಂದ ಒಟ್ಟು 3.4 ಲಕ್ಷ ರೂ. ಮೌಲ್ಯದ 35 ಗ್ರಾಂ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದ್ದು, ಪರಾರಿಯಾಗಿರುವ ಪ್ರಮೀಳಾ ಪ್ರಿಯಕರ ಸುಧಾಕರ್‌ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.



