ಕಮಲ್ ಹಾಸನ್ ನಟನೆಯ ‘ಥಗ್ ಲೈಫ್’ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿದೆ. ಹಾಕಿದ ಬಂಡವಾಳವೂ ಬರದೆ ನಿರ್ಮಾಪಕರು ಕೈ ಕೈ ಹೊಸಕಿಕೊಳ್ಳುತ್ತಿದ್ದಾರೆ. ಈ ವರ್ಷದ ಈ ವರೆಗಿನ ಅತ್ಯಂತ ಹೀನಾಯವಾಗಿ ಸೋತ ಸ್ಟಾರ್ ಸಿನಿಮಾ ಎಂಬ ಕುಖ್ಯಾತಿಗೆ ‘ಥಗ್ ಲೈಫ್’ ಪಾತ್ರವಾಗಿದೆ. ಇದೀಗ ಈ ಸಿನಿಮಾ ಸದ್ದಿಲ್ಲದೆ ಒಟಿಟಿಯಲ್ಲಿ ಬಿಡುಗಡೆ ಆಗಿದ್ದು ಇದು ಕಮಲ್ ಹಾಸನ್ ಗೆ ಭಾರಿ ಮುಖಭಂಗ ಉಂಟು ಮಾಡಿದೆ.
ಥಗ್ ಲೈಫ್ ಸಿನಿಮಾ ಜೂನ್ 5 ಕ್ಕೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಸಿನಿಮಾದ ಪ್ರಚಾರ ಸಂದರ್ಭದಲ್ಲಿ ಕಮಲ್ ಹಾಸನ್, ಕನ್ನಡ ಭಾಷೆಯ ಬಗ್ಗೆ ಆಡಿದ ಮಾತಿಗೆ ಸಾಕಷ್ಟು ವಿರೋಧ ವ್ಯಕ್ತವಾಗಿದ್ದು ಇದೇ ಕಾರಣಕ್ಕೆ ಕರ್ನಾಟಕದಲ್ಲಿ ಸಿನಿಮಾ ಬಿಡುಗಡೆಗೆ ನಿಷೇಧ ಹೇರಲಾಗಿತ್ತು. ಥಗ್ ಲೈಫ್ ಸಿನಿಮಾವನ್ನು 8 ವಾರಗಳ ಬಳಿಕ ಚಿತ್ರವನ್ನು ಓಟಿಟಿಯಲ್ಲಿ ಬಿಡುಗಡೆ ಮಾಡಲು ಒಪ್ಪಂದವಾಗಿತ್ತು. ಆದರೆ 4 ವಾರ ಕಳೆಯುವ ಮುನ್ನ ನೆಟ್‌ಫ್ಲಿಕ್ಸ್‌ನಲ್ಲಿ ಸಿನಿಮಾ ಸ್ಟ್ರೀಮಿಂಗ್ ಆರಂಭವಾಗಿದೆ.
ಥಗ್ ಲೈಫ್ ಸಿನಿಮಾ ಚಿತ್ರಮಂದಿರದಲ್ಲಿ ಹೀನಾಯ ಸೋಲು ಕಂಡ ಕಾರಣ, ಸಿನಿಮಾವನ್ನು ಬೇಗನೆ ಒಟಿಟಿಗೆ ಬಿಡುಗಡೆ ಮಾಡಲು ನೆಟ್ಫ್ಲಿಕ್ಸ್ ನಿರ್ಮಾಪಕರ ಮೇಲೆ ಒತ್ತಡ ಹೇರಿತು. ಇಲ್ಲವಾದರೆ ಒಪ್ಪಂದದಲ್ಲಿರುವಂತೆ 110 ಕೋಟಿ ಹಣದ ಬದಲಾಗಿ ಕಡಿಮೆ ಹಣ ನೀಡುವುದಾಗಿ ಹೇಳಿದ್ದಾರೆ. ಇದೀಗ ಒಟಿಟಿಯ ಒತ್ತಡಕ್ಕೆ ಮಣಿದಿರುವ ‘ಥಗ್ ಲೈಫ್’ ನಿರ್ಮಾಪಕರು, ಎಂಟು ವಾರಕ್ಕೆ ಮುಂಚೆಯೇ ‘ಥಗ್ ಲೈಫ್’ ಸಿನಿಮಾವನ್ನು ಒಟಿಟಿಗೆ ಬಿಡುಗಡೆ ಮಾಡಿದ್ದಾರೆ. ‘ಥಗ್ ಲೈಫ್’ ಸಿನಿಮಾವನ್ನು ಮುಂಚಿತವಾಗಿ ಒಟಿಟಿಯಲ್ಲಿ ಬಿಡುಗಡೆ ಮಾಡಿದರೆ, ನಷ್ಟ ತುಂಬಿಕೊಡಬೇಕು ಎಂದು ಮಲ್ಟಿಪ್ಲೆಕ್ಸ್ಗಳು ನಿರ್ಮಾಪಕರಿಗೆ ನೊಟೀಸ್ ಕಳಿಸಿತ್ತು. ಆದರೆ ಅದನ್ನು ನಿರ್ಲಕ್ಷಿಸಿ ಇದೀಗ ಅವಧಿಗೆ ಮುಂಚಿತವಾಗಿ ಒಟಿಟಿಗೆ ಬಿಡುಗಡೆ ಮಾಡಲಾಗಿದೆ.