ತಿರುವನಂತಪುರಂ: ಅದೊಂದು ಸರಿಸುಮಾರು 20 ವರ್ಷಗಳಿಂದ ಪಾಳು ಬಿದ್ದಿರುವ ಮನೆ. ಇದೀಗ ಈ ಮನೆಯಲ್ಲಿ ಬೆಚ್ಚಿಬೀಳಿಸೋ ದೃಶ್ಯ ಕಂಡು ಬಂದಿದ್ದು, ಪೊಲೀಸರೇ ಒಂದು ಕ್ಷಣ ಆತಂಕಗೊಂಡಿದ್ದಾರೆ.
ಎಸ್, ಸುಮಾರು ವರ್ಷಗಳಿಂದ ಪಾಳುಬಿದ್ದಿದ್ದ ಮನೆಯ ಫ್ರಿಡ್ಜ್ ನಲ್ಲಿ ಮಾನವ ತಲೆಬುರುಡೆ ಮತ್ತು ಅಸ್ಥಿಪಂಜರ ಪತ್ತೆಯಾಗಿರುವ ಘಟನೆ ಕೇರಳದಲ್ಲಿ ನಡೆದಿದೆ.
ಅಸ್ತಿಯನ್ನು ಮಾನವನ ಮೂಳೆಗಳು ಎಂದು ಗುರುತಿಸಲಾಗಿದೆ. ಫೋರೆನ್ಸಿಕ್ ವಿಶ್ಲೇಷಣೆಯ ಮೂಲಕ ನಿಖರವಾದ ವಯಸ್ಸನ್ನು ಪರಿಶೀಲಿಸಬೇಕಾಗಿದೆ ಎಂದು ಚೊಟ್ಟನಿಕ್ಕಾರ ಪೊಲೀಸರು ಹೇಳಿದ್ದಾರೆ. ಅಲ್ಲದೇ ಇದು ಕೊಲೆ ಎಂದು ಶಂಕಿಸಿದ್ದಾರೆ.
ವಿಧಿವಿಜ್ಞಾನ ತಂಡವು ತಲೆಬುರುಡೆ ಮತ್ತು ಅಸ್ಥಿಪಂಜರದ ಭಾಗಗಳನ್ನು ಪರೀಕ್ಷಿಸಿ, ಮರಣೋತ್ತರ ಪರೀಕ್ಷೆಗೆ ಒಳಪಡಿಸಿದೆ. ಅವುಗಳನ್ನು ಶೈಕ್ಷಣಿಕ ಉದ್ದೇಶಗಳಿಗಾಗಿ ಬಳಸಿರುವ ಸಾಧ್ಯತೆ ಇದೆ. ಅಸ್ಥಿಪಂಜರ, ತಲೆಬುರುಡೆ ಮಹಿಳೆಯರದ್ದು, ಆದರೆ ಅವುಗಳು ಒಬ್ಬರದ್ದಲ್ಲ. ಅವುಗಳ ವಯಸ್ಸು ಮತ್ತು ಮೂಲವನ್ನು ಪತ್ತೆ ಹಚ್ಚುವುದು ಕಠಿಣವಾದರೂ ಈ ಬಗ್ಗೆ ಕೂಡ ಪರಿಶೀಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ 20 ವರ್ಷಗಳಿಂದ ಈ ಮನೆಯಲ್ಲಿ ಯಾರೂ ವಾಸವಿರಲಿಲ್ಲ. ಆದರೂ ಮನೆಗೆ ಮೂಳೆಗಳು ಹೇಗೆ ಬಂದಿವೆ? ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ. ಮನೆಯ ಮಾಲೀಕರು, ವೈದ್ಯರು ಮತ್ತು ನೆರೆಹೊರೆಯವರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಾಳು ಬಿದ್ದ ಮನೆಯಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿ ಸ್ಥಳೀಯ ಪಾಲಿಕೆ ಸದಸ್ಯೆ ಇಂದಿರಾ ಧರ್ಮರಾಜನ್ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಮನೆಯನ್ನು ಪರಿಶೀಲನೆ ನಡೆಸಿದ್ದಾರೆ. ಮೂಳೆಗಳು ಪತ್ತೆಯಾದ ನಂತರ ಚೊಟ್ಟನಿಕ್ಕರ ಪೊಲೀಸರು ಬಿಎನ್ಎಸ್ ಕಾಯ್ದೆಯಡಿಯಲ್ಲಿ ಅಸ್ವಾಭಾವಿಕ ಸಾವಿನ ಪ್ರಕರಣವನ್ನು ದಾಖಲಿಸಿದ್ದು, ತನಿಖೆ ಕೈಗೊಂಡಿದ್ದಾರೆ.