ಮಡಿಕೇರಿ: ಕೊಡಗಿನ ತಡಿಯಂಡಮೋಳ್ ಬೆಟ್ಟಕ್ಕೆ ಟ್ರೆಕ್ಕಿಂಗ್ಗೆ ತೆರಳಿದ್ದ ಮಹಿಳೆ ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ನಾಪತ್ತೆಯಾದವರನ್ನು ಶರಣ್ಯ (36) ಎಂದು ಗುರುತಿಸಲಾಗಿದ್ದು, ಅವರು ಯವಕಪಾಡಿ ಗ್ರಾಮದ ಖಾಸಗಿ ಹೋಂಸ್ಟೇನಲ್ಲಿ ತಂಗಿ ಅಲ್ಲಿಂದ ಒಬ್ಬರೇ ಟ್ರೆಕ್ಕಿಂಗ್ಗೆ ತೆರಳಿದ್ದರು.
ಈ ಪ್ರದೇಶದಲ್ಲಿ ಕಾಡಾನೆಗಳ ಹಾವಳಿ ಇರುವ ಹಿನ್ನೆಲೆಯಲ್ಲಿ, ಇತರ ಪ್ರವಾಸಿಗರ ಜೊತೆ ಅವರನ್ನು ಕಳುಹಿಸಲಾಗಿತ್ತು. ಆದರೆ, ಟ್ರೆಕ್ಕಿಂಗ್ಗೆ ತೆರಳಿದ್ದ ಉಳಿದವರು ಹಿಂತಿರುಗಿದರೂ ಶರಣ್ಯ ಮರಳಿಲ್ಲ.
ಈ ಬಗ್ಗೆ ಸ್ಥಳೀಯ ನಿವಾಸಿ ಮುತ್ತಪ್ಪ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ, ಪೊಲೀಸರು ಹಾಗೂ ಗ್ರಾಮಸ್ಥರು ಬೆಟ್ಟ ಪ್ರದೇಶದಲ್ಲಿ ಶೋಧ ಕಾರ್ಯ ನಡೆಸಿದರೂ ಮಹಿಳೆಯ ಸುಳಿವು ಸಿಗಲಿಲ್ಲ.
ಇಂದು ಮತ್ತೊಮ್ಮೆ ವ್ಯಾಪಕ ಶೋಧ ಕಾರ್ಯ ಮುಂದುವರಿದಿದೆ. ಶರಣ್ಯ ಅವರ ಮೊಬೈಲ್ ಕೇರಳ ಜಾಲದಲ್ಲಿ ಕಾರ್ಯನಿರ್ವಹಿಸುತ್ತಿರುವುದು ತಿಳಿದುಬಂದಿದೆ. ನಾಪೋಕ್ಲು ಠಾಣಾಧಿಕಾರಿ ರಾಘವೇಂದ್ರ ಅವರ ನೇತೃತ್ವದಲ್ಲಿ ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಬೆಟ್ಟ ಪ್ರದೇಶದಲ್ಲಿ ಶಿಬಿರ ಹೂಡಿ ಶೋಧ ಕಾರ್ಯ ಮುಂದುವರೆಸುತ್ತಿದ್ದಾರೆ.



