ವಿಜಯಸಾಕ್ಷಿ ಸುದ್ದಿ, ಗದಗ : ಸಂತ ಕಬೀರ ಹಾಗೂ ಶರೀಫರ ಬೋಧನೆಗಳು ಆಧ್ಯಾತ್ಮಿಕತೆಯ ಮಹತ್ವವನ್ನು ಎತ್ತಿ ತೋರಿಸುತ್ತವೆ. ಬದುಕಿನ ಕಾಲದಲ್ಲಿ ಶತಮಾನಗಳ ವ್ಯತ್ಯಾಸವಿದ್ದರೂ ವಿಚಾರಗಳಲ್ಲಿ ಸಾಮ್ಯತೆಯನ್ನು ಗುರುತಿಸಬಹುದಾಗಿದೆ. ಗುರುವಿನ ಮಾರ್ಗದರ್ಶನದಲ್ಲಿ ಅಂತರಂಗ ಶೋಧನೆಯ ಮೂಲಕ ಔನ್ನತ್ಯವನ್ನು ಸಾಧಿಸುವ ಮಾರ್ಗವನ್ನು ತೋರಿದ್ದಾರೆ ಎಂದು ಉಪನ್ಯಾಸಕಿ ಸುಮನ್ ಕುಲಕರ್ಣಿ ನುಡಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ತೋಂಟದ ಕ.ಸಾ.ಪ ಕಾರ್ಯಾಲಯದ ಸಿದ್ಧಲಿಂಗ ಶ್ರೀಗಳ ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಂತ ಶಿಶುನಾಳ ಶರೀಫರು ಮತ್ತು ಸಂತ ಕಬೀರರ ಕಾವ್ಯ ಸಾಮ್ಯತೆ ಕುರಿತು ಉಪನ್ಯಾಸ ನೀಡಿ ಮಾತನಾಡಿದರು.
ಇವರು ಸಾಂಪ್ರದಾಯಿಕ ಆಚರಣೆಗಳನ್ನು ತಿರಸ್ಕರಿಸಿದರು. ಆಧ್ಯಾತ್ಮಿಕ ಜ್ಞಾನವನ್ನು ಪಡೆಯಲು ಕಬೀರ ಮತ್ತು ಶರೀಫರು ಭಕ್ತಿ, ಪ್ರೀತಿ ಮತ್ತು ಧ್ಯಾನದ ಮಹತ್ವವನ್ನು ಒತ್ತಿ ಹೇಳಿದರು. ಪ್ರತಿಯೊಬ್ಬ ಮನುಷ್ಯನು ದೈವಿಕತೆಯ ಕಿಡಿಯನ್ನು ಹೊಂದಿದ್ದಾನೆ. ಅದರೊಂದಿಗೆ ಸಂಪರ್ಕ ಸಾಧಿಸಲು ಶ್ರಮಿಸಬೇಕು ಎಂದು ಅವರು ನಂಬಿದ್ದರು. ಅವರು ಜಾತಿ ವ್ಯವಸ್ಥೆ ಸಾಮಾಜಿಕ ಅಸಮಾನತೆಯನ್ನು ಟೀಕಿಸಿದರು. ಎಲ್ಲಾ ಮಾನವರ ಸಮಾನತೆಗೆ ಒತ್ತು ನೀಡಿದರು. ಇವರ ಬೋಧನೆಗಳು ಪ್ರೀತಿ, ಭಕ್ತಿ ಮತ್ತು ಸಾರ್ವತ್ರಿಕ ಸಹೋದರತ್ವದ ಮನೋಭಾವವನ್ನು ಒಳಗೊಂಡಿವೆ.
ರತ್ನಾ ಪುರಂತರ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿ ವಾರದ ಕಾರ್ಯಕ್ರಮಗಳು ವೈವಿಧ್ಯಮಯವಾಗಿ ನಡೆದುಕೊಂಡು ಬರುತ್ತಿವೆ. ಹೀಗೆಯೇ ನಿರಂತರತೆಯನ್ನು ಕಾಯ್ದುಕೊಂಡು ಸಾಹಿತ್ಯ ಪ್ರೇಮಿಗಳಿಗೆ ರಸಾನಂದವನ್ನು ಉಣಬಡಿಸುತ್ತಿರುವ ಗದಗ ಜಿಲ್ಲಾ ಕಸಾಪ ರಾಜ್ಯದಲ್ಲಿಯೇ ಮಾದರಿಯಾಗಿದೆ.
ತಮ್ಮ ತಂದೆಯವರ ಹೆಸರಿನಲ್ಲಿ ದತ್ತಿನಿಧಿ ಸ್ಥಾಪಿಸುವದಾಗಿ ಘೋಷಿಸಿದರು.
ವೇದಿಕೆ ಮೇಲೆ ಶ್ರೀಕಾಂತ ಬಡ್ಡೂರ, ಡಿ.ಎಸ್. ಬಾಪೂರಿ ಉಪಸ್ಥಿತರಿದ್ದರು. ಕಿಶೋರಬಾಬು ನಾಗರಕಟ್ಟಿ ಸ್ವಾಗತಿಸಿದರು. ಶಿವಾನಂದ ಗಿಡ್ನಂದಿ ವಂದಿಸಿದರು. ಡಾ.ದತ್ತಪ್ರಸನ್ನ ಪಾಟೀಲ ಕಾರ್ಯಕ್ರಮ ನಿರೂಪಿಸಿದರು.
ಕೆ.ಎಚ್. ಬೇಲೂರ, ವಿ.ಎಸ್. ದಲಾಲಿ, ಶೇ.ಶಿ. ಕಳಸಾಪುರ, ಜಿ.ಎ. ಪಾಟೀಲ, ಡಾ. ಆರ್.ಎನ್. ಗೋಡಬೋಲೆ, ಸುರೇಶ ಕುಂಬಾರ, ಎಚ್.ಕೆ. ದಾಸರ, ಎಂ.ಎಫ್.ಡೋಣಿ, ಆರ್.ಡಿ. ಕಪ್ಪಲಿ, ಪಿ.ವಿ. ಇನಾಮದಾರ, ಪ್ರಶಾಂತ ಪಾಟೀಲ, ಆಯ್.ಬಿ. ಒಂಟೆಲಿ, ಶರಣಪ್ಪ ತಳವಾರ, ರಾಜಶೇಖರ ಕರಡಿ, ಕೆ.ಎಸ್. ಗುಗ್ಗರಿ, ಬಸವರಾಜ ವಾರಿ, ರಾಜೇಂದ್ರ ಬರದ್ವಾಡ, ಬಿ.ಬಿ. ಹೊಳಗುಂದಿ, ಬಸವರಾಜಗಣಪ್ಪನವರ, ಜಿ.ಎ. ಪಾಟೀಲ, ಶಶಿಕಾಂತ ಕೊರ್ಲಹಳ್ಳಿ, ಸಿ.ಎಂ. ಮಾರನಬಸರಿ, ಶಾಂತಾ ಗಣಪ್ಪನವರ, ಪ್ರೇಮಾ ಹೊನ್ನಗುಡಿ, ಎಸ್.ಎಂ. ಕಾತರಕಿ, ಎಸ್.ವಿ. ಬಳ್ಳಿ, ಎಸ್.ಬಿ. ಪಾಟೀಲ, ಪ್ರತೋ ನಾರಾಯಣಪುರ, ಅಶೋಕ ಸತ್ಯರಡ್ಡಿ, ರಾಜಶೇಖರ ಕರಡಿ, ಬಿ.ಎಸ್. ಹಿಂಡಿ, ಸತೀಶಕುಮಾರ ಚನ್ನಪ್ಪಗೌಡ, ಬಸವರಾಜ ವಾರಿ, ಆರ್.ಡಿ. ಕಪ್ಪಲಿ, ಎಚ್.ಟಿ. ಸಂಜೀವಸ್ವಾಮಿ, ಬಿ.ಬಿ. ಹೊಳಗುಂದಿ ಉಪಸ್ಥಿತರಿದ್ದರು.
ಅಧ್ಯಕ್ಷತೆ ವಹಿಸಿ ವಿವೇಕಾನಂದಗೌಡ ಪಾಟೀಲ ಮಾತನಾಡಿ, ನಮ್ಮ ಆಧ್ಯಾತ್ಮಿಕ ಪರಂಪರೆಯ ಮೂಲ ಉದ್ದೇಶ ಒಂದೇ ಪ್ರಶ್ನೆ ನಾನು ಯಾರು ಎನ್ನುವುದಾಗಿದೆ. ಅದಕ್ಕೆ ಉತ್ತರ ಕಂಡುಕೊಳ್ಳಲು ವೇದಗಳು, ಉಪನಿಷತ್ತುಗಳು, ದ್ವೈತ-ಅದ್ವೈತ-ವಿಶಿಷ್ಟಾದ್ವೈತ, ಶಕ್ತಿ ವಿಶಿಷ್ಟಾದ್ವೈತಗಳು ಹುಟ್ಟಿಕೊಂಡವು. ಇವರೆಲ್ಲರ ಸಿದ್ಧಾಂತ ಎಲ್ಲಿಂದ ಬಂದಿರುವೆವೋ ಅಲ್ಲಿಗೆ ಸೇರುವುದಾಗಿದೆ ಎಂದು ತಿಳಿಸಿದರು.