HomeArt and Literature`ಬೊಗಸೆಯೊಳಗಿನ ಚುಟುಕು ಸಾಗರ’

`ಬೊಗಸೆಯೊಳಗಿನ ಚುಟುಕು ಸಾಗರ’

For Dai;y Updates Join Our whatsapp Group

Spread the love

`ಚುಟುಕು ಸಾಹಿತ್ಯ-ಬದುಕಿಗೆ ಲಾಲಿತ್ಯ’ ಇದು ಚುಟುಕು ಸಾಹಿತ್ಯ ಪರಿಷತ್ತಿನ ಧ್ಯೇಯ ವಾಕ್ಯ. ಚುಟುಕು ಬ್ರಹ್ಮ ದಿನಕರ ದೇಸಾಯಿ ಅವರ ಚುಟುಕುಗಳು ಯುವ ಪೀಳಿಗೆಯ ಬರಹಗಾರರಿಗೆ ದಾರಿದೀಪದಂತಿವೆ. ಅತಿ ಕಡಿಮೆ ಪದಗಳಲ್ಲಿ ಅತ್ಯಂತ ತೀಕ್ಷ್ಣವಾಗಿ ಮನಕ್ಕೆ ಮುಟ್ಟುವ ಹಾಗೆ ಬರೆಯುವುದು ಒಂದು ಸವಾಲಿನ ಕೆಲಸವೇ ಸರಿ. ಅಂತಹ ಸವಾಲನ್ನು ಸಮರ್ಥವಾಗಿ ಎದುರಿಸಿ ಸಾಹಿತ್ಯ ರಚಿಸುವವರ ಸಂಖ್ಯೆ ಹೆಚ್ಚಾಗುತ್ತಿರುವುದು ಸಂತಸದ ಸಂಗತಿ. ಇದಕ್ಕೆ ಪೂರಕವಾಗಿ ಮೈಸೂರಿನ ವಿ. ಸೀತಾಲಕ್ಷ್ಮೀ ವರ್ಮ ಅವರ ಚೊಚ್ಚಲ ಚುಟುಕು ಸಂಕಲನ `ಬೊಗಸೆಯೊಳಗಿನ ಚುಟುಕು ಸಾಗರ’ ಕೃತಿಯ ಅವಲೋಕನ ಮಾಡುವ ಸಣ್ಣ ಪ್ರಯತ್ನವೇ ಈ ಬರಹ.

ಕಿರಿದರಲ್ಲಿ ಹಿರಿದರ್ಥ ಹೊರಹೊಮ್ಮಿಸುವ ಈ ಸಂಕಲನದಲ್ಲಿ ಒಟ್ಟು 180 ಚುಟುಕುಗಳು ಮಿಳಿತಗೊಂಡಿವೆ. ಸಾಹಿತ್ಯದ ಬಗ್ಗೆ ಬಾಲ್ಯದಿಂದಲೇ ಒಲವನ್ನು ಮೈಗೂಡಿಸಿಕೊಂಡ ವಿ. ಸೀತಾಲಕ್ಷ್ಮೀ ವರ್ಮ ಅವರು ಬದುಕಿನಲ್ಲಿ ಬರುವ ಎಲ್ಲ ವಿಷಯಗಳ ಬಗ್ಗೆಯೂ ಈ ಕೃತಿಯಲ್ಲಿ ಚುಟುಕುಗಳ ಮೂಲಕ ಹೊಸದಾದ ಸಂದೇಶ ನೀಡಲು ಪ್ರಯತ್ನಿಸಿದ್ದಾರೆ ಎಂದು ನನಗನಿಸಿತು.

ಈ ‘ಬೊಗಸೆಯೊಳಗಿನ ಚುಟುಕು ಸಾಗರ’ದಲ್ಲಿ ಕವಯಿತ್ರಿ ಲೀಲಾಜಾಲವಾಗಿ ಈಜಾಡಿದ್ದಾರೆ. ತಮ್ಮ ಮನದ ಭಾವನೆಗಳನ್ನು ಸಹಜವಾಗಿ ಅಭಿವ್ಯಕ್ತಿಸಿ, ಅದನ್ನು ಕಾವ್ಯವಾಗಿಸಿದ್ದಾರೆ. ಕಾವ್ಯಾತ್ಮಕವಾದ ಹಲವಾರು ಚುಟುಕುಗಳು ಈ ಸಂಕಲನದಲ್ಲಿವೆ. ಚರ್ಚೆ ಎನ್ನುವ ಚುಟುಕಿನಲ್ಲಿ

`ಹಿಡಿ ಮಣ್ಣು ಬೇಡ ಸುಟ್ಟುಬಿಡಿ,

ಚರ್ಚೆಯೊಳಗೆ ಬಿದ್ದಿದ್ದ

ಜಡ ದೇಹಕ್ಕೇನು?

ಮಿಸುಕಾಡಲೇ ಇಲ್ಲ!’ ಎಂದು ಹೇಳುವ ಇವರಿಗೆ, ಚರ್ಚೆ ಎನ್ನುವುದು ಆರೋಗ್ಯಕರವಾಗಿದ್ದರೆ ಸರಿ, ಇಲ್ಲದಿರೆ ಅದು ವ್ಯರ್ಥ ಪ್ರಯತ್ನ, ಅದನ್ನು ಸುಟ್ಟುಬಿಡುವುದೇ ಉತ್ತಮ ಅನಿಸಿ ಈ ರೀತಿಯಾಗಿ ಹೇಳಿದ್ದಾರೆ, ಇದು ನಿಜಕ್ಕೂ ಅರ್ಥ ಪೂರ್ಣ ಚುಟುಕಾಗಿದೆ.

`ಬಾಳಿನಾಟ’ ಎಂಬ ಚುಟುಕಿನಲ್ಲಿ ಬದುಕಿನ ಹಲವು ಮಜಲುಗಳನ್ನು ಹೀಗೆ ಚಿತ್ರಿಸಿದ್ದಾರೆ.

`ಮೂರು ದಿಕ್ಕಿನಲ್ಲಿ

ನೂರು ಕಲಹ, ನೂರು ದಾಹ

ಹೀಗೂ ಹಾಗೂ

ಸಾವು ಬಾಳಿನಾಟ ನರಳಾಟ’

ಹೀಗೆ ಕೇವಲ ನಾಲ್ಕು ಸಾಲುಗಳಲ್ಲಿ ಬಾಳನ್ನು ಚಿತ್ರಿಸಿರುವುದು ಅದ್ಭುತವೇ ಸರಿ.

ಬೊಗಸೆಯೊಳಗಿನ ಚುಟುಕು ಸಾಗರದಲ್ಲಿ ವೈವಿಧ್ಯಮಯವಾದ ಚುಟುಕುಗಳು ಸಹೃದಯರ ಗಮನ ಸೆಳೆಯುತ್ತವೆ. ಅಂತಹ ಕೆಲವು ಚುಟುಕುಗಳನ್ನಿಲ್ಲಿ ಹೆಸರಿಸಬಹುದು. ಉದಾಹರಣೆಗೆ, ಅರ್ಥವತ್ತಾದ ಬಾಳು, ಒಳದನಿ, ಕಾಯಕಯೋಗಿ, ಗುರಿ, ನೆರಳು, ಯಾಕೆ?, ಇದ್ದವರು, ಕಾಡದಿರು ಹೀಗೆ, ಜೊತೆಗಿಲ್ಲ, ದೇವರ ಮನೆಯಲ್ಲಿ, ಸಾಧನೆ, ಶಕ್ತಿ, ಮುಂತಾದ ಚುಟುಕುಗಳಲ್ಲಿ ಓದುಗರ ಗಮನ ಸೆಳೆಯುವ ಶಕ್ತಿ ಇದೆ.

ಇದೇ ಸಮಯದಲ್ಲಿ ವಾಚ್ಯತೆಯ ಕಾರಣದಿಂದ ಗಮನ ಸೆಳೆಯುವಲ್ಲಿ ವಿಫಲವಾಗಿವೆ. ಉದಾಹರಣೆಗೆ… ಸ್ಮಾರ್ಟ್, ಬಾಳಲಿಲ್ಲ, ವೇಷಧಾರಿ, ನನ್ನ ಕಾವ್ಯ, ಬೆಲೆಯಿಲ್ಲ, ಬಂಡೆಯಾಗಿದೆ, ಚೆಲುವಿಲ್ಲ ಮುಂತಾದ ಕೆಲವು ಚುಟುಕುಗಳಲ್ಲಿ ಕಾವ್ಯದ ಅಂಶಗಳು ಕಡಿಮೆಯಾಗಿ ವಾಚ್ಯತೆಯಿಂದಾಗಿ ಸೊಗಿದಂತೆ ಅನಿಸುತ್ತವೆ. ಕವಯಿತ್ರಿಯ ಪ್ರಥಮ ಪ್ರಯತ್ನ ಇದಾಗಿರುವುದರಿಂದ, ಸಾಹಿತ್ಯದಲ್ಲಿ ಇವೆಲ್ಲ ಸಾಮಾನ್ಯ ಸಂಗತಿ ಎನ್ನಬಹದು.

ಅದೇನೇ ಇರಲಿ, ಕವಯಿತ್ರಿಯಿಂದ ಮುಂದಿನ ದಿನಗಳಲ್ಲಿ ಇದಕ್ಕಿಂತ ಉತ್ತಮವಾದ ಸಾಹಿತ್ಯ ಕೃತಿಗಳು ರಚನೆಯಾಗಲಿ, ಆ ಸಾಮರ್ಥ್ಯವೂ ಇವರಿಗಿದೆ. ಇವರ ಚುಟುಕುಗಳು ಚುರುಕು ಮುಟ್ಟಿಸುವಂತೆ ಇವೆ ಎಂಬುದAತೂ ಸತ್ಯ. ಇವರಿಂದ ಅಂತಹ ಸಾಹಿತ್ಯ ಹೊರಹೊಮ್ಮಲಿ ಎಂಬ ಆಶಯದೊಂದಿಗೆ…

– ಶಿವಪ್ರಸಾದ್ ಹಾದಿಮನಿ.

ಕನ್ನಡ ಉಪನ್ಯಾಸಕರು, ಕೊಪ್ಪಳ.

ಪುಸ್ತಕದ ಹೆಸರು: `ಬೊಗಸೆಯೊಳಗಿನ ಚುಟುಕು ಸಾಗರ’

ಕವಯಿತ್ರಿ: ವಿ. ಸೀತಾಲಕ್ಷ್ಮೀ ವರ್ಮ.

ಪ್ರಥಮ ಮುದ್ರಣ: 2024.

ಮುದ್ರಕರು: ಗುಪ್ತಾ ಆಫ್‌ಸೆಟ್ ಪ್ರಿಂಟರ್ಸ್,

ವಿದ್ಯಾರಣ್ಯಪುರ-ಮೈಸೂರು.

ಪ್ರಕಾಶಕರು: ಎಂ.ಜಿ. ಅರಸ್.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!