ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಉತ್ತರ ಕರ್ನಾಟಕದ ಹೆಂಗಳೆಯರ ಪಾಲಿನ ವಿಶೇಷವಾದ ಗೌರಿ ಹುಣ್ಣಿಮೆ ಹಬ್ಬವನ್ನು ಬುಧವಾರ ಪಟ್ಟಣ ಸೇರಿ ತಾಲ್ಲೂಕಿನೆಲ್ಲೆಡೆ ಸಂಭ್ರಮದಿಂದ ಆಚರಿಸಿದರು.
ಹಬ್ಬದ ಹಿನ್ನೆಲೆ ಪಟ್ಟಣದ ಮಾರುಕಟ್ಟೆಯಲ್ಲಿ ಸಕ್ಕರೆ ಗೊಂಬೆ, ಹೂವು, ಹಣ್ಣು, ವಸ್ತ್ರಾಭರಣಗಳು ಸೇರಿ ಅಗತ್ಯ ವಸ್ತುಗಳ ಖರೀದಿಯ ಭರಾಟೆ ಜೋರಾಗಿಯೇ ನಡೆಯಿತು. ಗ್ರಾಮೀಣ ಭಾಗದಲ್ಲಿ, ಅದರಲ್ಲೂ ರೈತ ಸಮುದಾಯದವರೇ ಅತ್ಯಂತ ವಿಜೃಂಭಣೆಯಿದ ಆಚರಿಸುವ ಹಬ್ಬವನ್ನು ಮುಂಗಾರು-ಹಿಗಾರಿನ ಏಳುಬೀಳಿನ ನಡುವೆಯೂ ತಮ್ಮ ಮನೆಯ ಹೆಣ್ಣು ಮಕ್ಕಳ ಸಂತೋಷ, ಸಂಭ್ರಮಕ್ಕೆ ಅಡ್ಡಿಯಾಗಬಾರದು ಎಂದು ವಿಜೃಂಭಣೆಯಿಂದಲೇ ಆಚರಿಸಿದರು.
ಸಕ್ಕರೆ ಬೆಲೆ ಹೆಚ್ಚಳವಾಗಿದ್ದರೂ ಈ ವರ್ಷವೂ ಪ್ರತಿ ಕೆಜಿ ಸಕ್ಕರೆ ಗೊಂಬೆಗೆ 120ರಿಂದ 140 ರೂಗಳಂತೆ ಮಾರಾಟ ಮಾಡಿದರು. ಜತೆಗೆ ಹೂವಿನ ಬೆಲೆಯೂ ಹೆಚ್ಚಳವಾಗಿತ್ತು. ಹುಣ್ಣಿಮೆ ದಿನ ಬುಧವಾರ ಸಂಜೆ ಮಹಿಳೆಯರು, ಯುವತಿಯರು, ಮಕ್ಕಳು ಹೊಸ ಉಡುಗೆಯುಟ್ಟು, ಹೂವಿನ ದಂಡೆ ಹಾಗೂ ಆಭರಣ ತೊಟ್ಟು ಗೌರಮ್ಮನಿಗೆ ಸಕ್ಕರೆ-ಆರತಿ ಬೆಳಗಿ ಸಂಭ್ರಮಿಸಿದರು. ರಾಜಾ, ರಾಣಿ, ಕುದರೆ, ತೇರು, ಆನೆ, ಒಂಟೆ ಹೀಗೆ ವಿವಿಧ ಆಕಾರದ ಸಕ್ಕರೆ ಗೊಂಬೆಗಳನ್ನು ಆರತಿ ತಟ್ಟೆಯಲ್ಲಿಟ್ಟುಕೊಂಡು `ಗೌರಿ ಗೌರೆಂತ ಗಣಪತಿಯಂತ, ಮುತ್ತಿನ ಮುಗುಡ್ಯಂತ, ಛತ್ತರಗೊಂಬೆತ ಹೋಗಿ ಬಾ ಗೌರವ್ವ ಸಾಗಿ ಬಾ ಗೌರವ್ವ’ ಎಂದು ಹಾಡುತ್ತಾ ಗೌರಿ ದೇವಸ್ಥಾನಕ್ಕೆ ಹೋಗಿ ಆರತಿ ಬೆಳಗಿಸಿದರು. ಗ್ರಾಮೀಣ ಪ್ರದೇಶಗಳಲ್ಲಿ ಸಂಜೆ ಸಕ್ಕರೆ ಆರತಿ ಸಂಭ್ರಮದ ನಂತರ ರಾತ್ರಿ ಹೆಣ್ಣುಮಕ್ಕಳೆಲ್ಲ ಸೇರಿ ಕೋಟಲಾಟ ಆಡಿ ಸಂತಸಪಟ್ಟರು.



