ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ/ಶಿಗ್ಲಿ: ಗದಗ ಜಿಲ್ಲೆಯ ಸಾಹಿತ್ಯ ಶಿಕ್ಷಣ ಕ್ಷೇತ್ರಕ್ಕೆ ಶ್ರೇಷ್ಠವಾದ ಕೊಡುಗೆ ನೀಡಿದ ಶಿಗ್ಲಿ ಗ್ರಾಮದ ಜನರ ಬಹುದಿನದ ಬೇಡಿಕೆಯಾಗಿದ್ದ ಸರಕಾರಿ ಪ್ರೌಢಶಾಲೆಯ ಕನಸು ಇದೀಗ ನನಸಾಗಿದೆ.
ಶಿಗ್ಲಿ ಗ್ರಾಮಕ್ಕೆ ಶಿಗ್ಲಿ ಸೇರಿ ಸುತ್ತಲಿನ ಹಲವು ಗ್ರಾಮಗಳ ಬಡ ವಿದ್ಯಾರ್ಥಿಗಳು ಪ್ರಾಥಮಿಕ, ಪ್ರೌಢ ಶಿಕ್ಷಣಕ್ಕಾಗಿ ಬರುತ್ತಾರೆ. ಆದರೆ ಗ್ರಾಮೀಣ ಭಾಗದ ಬಡ ಮಕ್ಕಳಿಗೆ ಇಲ್ಲಿ ಸರ್ಕಾರಿ ಪ್ರೌಢ ಶಿಕ್ಷಣದ ಕೊರತೆಯಿತ್ತು. ಹೈಸ್ಕೂಲ್ ಶಿಕ್ಷಣಕ್ಕಾಗಿ ಅನೇಕ ವರ್ಷಗಳಿಂದ ಈ ಭಾಗದ ಜನಪ್ರತಿನಿಧಿಗಳು, ಶಿಕ್ಷಣ ಪ್ರೇಮಿಗಳು, ಅಧಿಕಾರಿಗಳು ಪ್ರಯತ್ನ ಮಾಡುತ್ತಲೇ ಇದ್ದರು. ಕಳೆದ 2 ವರ್ಷದಿಂದ ಶಾಸಕ ಡಾ. ಚಂದ್ರು ಲಮಾಣಿಯವರ ವಿಶೇಷ ಪ್ರಯತ್ನದ ಫಲವಾಗಿ ಈ ಬೇಡಿಕೆ ಈಡೇರಿದಂತಾಗಿದೆ.
ಗ್ರಾಮಕ್ಕೆ ಪ್ರಸ್ತುತ ಶೈಕ್ಷಣಿಕ ವರ್ಷದಿಂದಲೇ ಸರ್ಕಾರಿ 8ನೇ ತರಗತಿಯಿಂದ 10ನೇ ತರಗತಿಯವರಗೆ ಈಗಿರುವ ಶಿಗ್ಲಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲೇ (ಉನ್ನತೀಕರಿಸಿದ ಸರಕಾರಿ ಮಾದರಿ ಶಾಲೆಯಾಗಿ) ಶೈಕ್ಷಣಿಕ ಕಾರ್ಯಚಟುವಟಿಕೆ ಪ್ರಾರಂಭಿಸುವಂತೆ ಇಲಾಖೆ ಆದೇಶ ಹೊರಡಿಸಿದೆ. ಇದು ಶಿಗ್ಲಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಮಕ್ಕಳಿಗೆ ಅನೂಕೂಲವಾಗಲಿದೆ. ಆದೇಶವಾಗಿರುವ ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮದಲ್ಲಿ ಸಂಭ್ರಮದ ವಾತಾವರಣ ಕಂಡುಬಂದಿತು. ಶುಕ್ರವಾರ ಶಾಲೆಯಲ್ಲಿ ಗ್ರಾಮಸ್ಥರು, ಎಸ್‌ಡಿಎಂಸಿಯವರು ಸೇರಿ ಶಿಕ್ಷಕರಿಗೆ ಹಾಗೂ ಮಕ್ಕಳಿಗೆ ಸಿಹಿ ವಿತರಿಸಿ ಸಂಭ್ರಮಿಸಿದರು.
ಈ ವೇಳೆ ಸಂತೋಷ ತಾಂದಳೆ, ವಿರೂಪಾಕ್ಷಪ್ಪ ಶಿರಹಟ್ಟಿ, ಆದೇಶ ಹುಲಗೂರ, ಎಸ್‌ಡಿಎಂಸಿ ಅಧ್ಯಕ್ಷ ರಾಮಣ್ಣ ಬೂದಿಹಾಳ ಹಾಗೂ ಸದಸ್ಯರು, ಮುಖ್ಯೋಪಾಧ್ಯಾಯೆ ಎನ್.ವಿ. ಕುಲಕರ್ಣಿ, ಆರ್.ಡಿ. ಕಾಲಾಯಗರ, ಎಸ್.ಬಿ. ಅಣ್ಣಿಗೇರಿ, ಆರ್.ಎಫ್. ಕಪ್ಪತ್ತನವರ, ತಿಪ್ಪನಾಯಕ್ ಎಲ್., ದೀಪಾ ಭಸ್ಮೆ ಮುಂತಾದವರು ಪ್ರೌಢಶಾಲೆ ಮಂಜೂರಿಯಾಗಿರುವದಕ್ಕೆ ಹರ್ಷ ವ್ಯಕ್ತಪಡಿಸಿ ಸರಕಾರಕ್ಕೆ ಹಾಗೂ ಶಿಕ್ಷಣ ಇಲಾಖೆಗೆ ಅಭಿನಂದನೆ ಸಲ್ಲಿಸಿದರು.
ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯು ಒಂದೂವರೆ ಶತಮಾನವನ್ನು ಪೂರೈಸಿದ್ದು, ಈ ಶಾಲೆಗೆ ಪ್ರೌಢಶಾಲೆ ಮಂಜೂರಿಯಾಗಿರುವದು ಹೆಮ್ಮೆಯ ಸಂಗತಿಯಾಗಿದೆ. ಪ್ರೌಢಶಾಲೆ ಮಂಜೂರಿಯಾಗಲು ಶ್ರಮಿಸಿದ ಶಾಸಕರಿಗೆ, ಮಾಜಿ ಶಾಸಕರಿಗೆ, ಇಲ್ಲಿನ ಶಿಕ್ಷಣ ಪ್ರೇಮಿಗಳಿಗೆ, ಗ್ರಾಮಸ್ಥರಿಗೆ ಹಾಗೂ ಶಿಕ್ಷಣ ಇಲಾಖೆಗೆ ಅಭಿನಂದಿಸುವದಾಗಿ ಗ್ರಾ.ಪಂ ಸದಸ್ಯ ಯಲ್ಲಪ್ಪ ತಳವಾರ ಹೇಳಿದರು.