ಕಲಬುರಗಿ:- ಲಿವಿಂಗ್ ಗೆಳತಿಯ ಮೋಜು ಮಸ್ತಿಗಾಗಿ ಕಳ್ಳನಾದ ಪ್ರಿಯಕರ ಸೇರಿ ಆತನಿಗೆ ಸಹಾಯ ಮಾಡಿದ್ದ ಮತ್ತೋರ್ವ ಈಗ ಜೈಲು ಪಾಲಾಗಿದ್ದಾರೆ.
ಕೂಲಿ ಕೆಲಸ ಮಾಡುತ್ತಿದ್ದ ಬಡಪಾಯಿ ಮಹಿಳೆಯನ್ನ ಕರೆದುಕೊಂಡು ಹೋಗಿ ಹಲ್ಲೆ ಮಾಡಿ ಚಿನ್ನಾಭರಣಗಳನ್ನ ಸುಲಿಗೆ ಮಾಡಿದ್ದ ಇಬ್ಬರು ಕುಖ್ಯಾತ ಸುಲಿಗೆಕೋರರನ್ನ ಕಲಬುರಗಿ ವಿಶ್ವವಿದ್ಯಾಲಯ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಲ್ಲಪ್ಪ ಅಲಿಯಾಸ್ ಸಂಜು ಸೋಮಣ್ಣ (24) ಬಂಧಿತ ಪ್ರಮುಖ ಆರೋಪಿಯಾಗಿದ್ದು, ಇನ್ನು ಕಲ್ಲಪ್ಪನಿಗೆ ಸಹಾಯ ಮಾಡ್ತಿದ್ದ ಸಂತೋಷ್ ಎಂಬಾತನನ್ನು ಸಹ ಪೊಲೀಸರು ಬಂಧಿಸಿದ್ದಾರೆ.
ಕೂಲಿ ಕೆಲಸ ಮಾಡುತ್ತಿದ್ದ ಕಲ್ಲಪ್ಪ ಅಲಿಯಾಸ್ ಸಂಜು, ಮಹಿಳೆಯೊಬ್ಬಳ ಜೊತೆ ಲಿವಿಂಗ್ ಟುಗೆದರ್ ರಿಲೆಷನ್‌ಶಿಪ್‌ನಲ್ಲಿದ್ದ. ಹೀಗಾಗಿ ಆಕೆಯೊಂದಿಗೆ ಮೋಜು ಮಸ್ತಿ ಮಾಡಲು ಹಣ ಕಡಿಮೆ ಬಿದ್ದಾಗ ಪಿಕ್ ಪಾಕೇಟ್ ದಂಧೆ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಅದರಂತೆ ಕೂಲಿ ಮಾಡುವ ಮಹಿಳೆಯರನ್ನ ಟಾರ್ಗೆಟ್ ಮಾಡಿ ಸುಲಿಗೆ ಮಾಡುತ್ತಿದ್ದ ಎನ್ನುವುದು ತನಿಖೆಯಲ್ಲಿ ತಿಳಿದುಬಂದಿದೆ.
ಬಂಧಿತ ಸುಲಿಗೆಕೋರರಿಂದ 7.62 ಲಕ್ಷ ಮೌಲ್ಯದ 61 ಗ್ರಾಂ ಚಿನ್ನಾಭರಣ, 600 ಗ್ರಾಂ ಬೆಳ್ಳಿ ವಸ್ತುಗಳನ್ನ ಜಪ್ತಿ ಮಾಡಿಕೊಳ್ಳಲಾಗಿದೆ.



