ಆನೇಕಲ್:- ಯುವತಿ ಮೈಕೈ ಮುಟ್ಟಿ ಎಳೆದಾಡಿದ್ದ ಕಾಮುಕನನ್ನು ಬಂಧಿಸುವಲ್ಲಿ ಬೆಂಗಳೂರಿನ ಬನ್ನೇರುಘಟ್ಟ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಸಂತ್ರಸ್ತೆಯನ್ನು ಆನೇಕಲ್ನ ರೇಣುಕಾ ಬಡವಾಣೆ ನಿವಾಸಿ ಶಾಂತಿ ಎಂದು ಗುರುತಿಸಲಾಗಿದೆ. ಶಾಂತಿ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಹಲ್ಲೆ ಮಾಡಿದ ಪ್ರಮುಖ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ. ಜಾನ್ ರಿಚರ್ಡ್ ಬಂಧಿತ ಆರೋಪಿ.
ಪ್ರಕರಣ ಸಂಬಂಧ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ ಮಾತನಾಡಿ, ಮೂಲತಃ ಬೆಂಗಳೂರಿನವರೇ ಆದ ಶಾಂತಿ ಭಾನುವಾರ ಸಂಜೆ ಅಂಗಡಿಗೆ ಹೋಗುವ ವೇಳೆ ಯುವಕರು ಅಡ್ಡ ಹಾಕಿದ್ದಾರೆ. ಬಲವಂತವಾಗಿ ತಳ್ಳಾಡಿ ಬರುತ್ತೀರಾ ಎಂದು ಕೇಳಿದ್ದಾರೆ. ಈ ಸಂದರ್ಭದಲ್ಲಿ ಸ್ಥಳದಲ್ಲಿ 3-4 ನಾಲ್ಕು ಜನ ಇದ್ದರು. ಓರ್ವ ಮಾತ್ರ ಕಿರುಕುಳ ಕೊಟ್ಟು ಹಲ್ಲೆಗೈಯಲು ಬಂದಿದ್ದನು. ಎರಡ್ಮೂರು ಜನ ಆತನನ್ನು ಬಿಡಿಸಿದ್ದಾರೆ. ಹಲ್ಲೆ ಮಾಡಲು ಬಂದಿದ್ದವ ಪೊಲೀಸರ ವಶದಲ್ಲಿದ್ದಾನೆ. ಯುವತಿಗೆ ಗಂಭೀರ ಗಾಯಗಳು ಆಗಿಲ್ಲ ಎಂದು ತಿಳಿಸಿದರು.
ಸೋಮವಾರ ಬೆಳಿಗ್ಗೆ 11ಕ್ಕೆ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಯುವತಿ ದೂರು ದಾಖಲಿಸಿದ್ದಾರೆ. ಮೊದಲ ಆರೋಪಿ ನಮ್ಮ ವಶದಲ್ಲಿಯೇ ಇದ್ದಾನೆ. ಜಿಮ್ ಟ್ರೈನರ್ ಸಹ ಹಲ್ಲೆ ಮಾಡಿದ್ದಾನೆ. ಜಿಮ್ ಟ್ರೈನರ್ ಮೇಲೆಯೂ ದೂರು ದಾಖಲಾಗಿದೆ. ಆತನನ್ನ ವಶಕ್ಕೆ ಪಡೆಯುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಹೇಳಿದರು.