ಮಧ್ಯಪ್ರದೇಶ: ನವದೆಹಲಿಯಲ್ಲಿ ಶ್ರದ್ಧಾ ವಾಕರ್ ರಣಭೀಕರ ಹತ್ಯೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ಅಂಥದ್ದೇ ಮಾದರಿಯ ಹತ್ಯೆ ನಡೆದಿತ್ತು. ಇದೀಗ ಅಂಥಹದೇ ಪ್ರಕರಣವನ್ನು ಹೋಲುವ ಘಟನೆ ಮಧ್ಯಪ್ರದೇಶದ ದೇವಾಸ್ ನಗರದಲ್ಲಿ ನಡೆದಿದೆ.
ಬರೋಬ್ಬರಿ 8 ತಿಂಗಳ ಹಿಂದೆ ಲೀವ್ ಇನ್ ಪಾರ್ಟ್ನರ್‌ನಲ್ಲಿದ್ದ ಮಹಿಳೆಯನ್ನು ಹತ್ಯೆಗೈದು ಫ್ರಿಡ್ಜ್‌ನಲ್ಲಿಟ್ಟ ಘಟನೆ ನಡೆದಿದೆ. ಮಹಿಳೆಯ ದೇಹದ ಬಹುತೇಕ ಭಾಗಗಳು ಫ್ರಿಡ್ಜ್‌ನಲ್ಲಿ ಪತ್ತೆಯಾಗಿವೆ. ಸದ್ಯ ಆರೋಪಿ ಸಂಜಯ್ ಪಾಟಿದಾರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಈತನಿಗೆ ಈಗಾಗಲೇ ಮದುವೆಯಾಗಿದೆ. ಪತ್ನಿ ಮನೆಯಲ್ಲಿ, ಆದರೆ ಹೊರಗಡೆ ಈತನ ಬ್ಯಾಚ್ಯುಲರ್ ಅಂತಾ ಹೇಳಿಕೊಂಡು ತಿರುಗಾಡುತ್ತಿದ್ದ.
ಮದುವೆಯಾಗಿರುವ ವಿಚಾರ ಮುಚ್ಚಿಟ್ಟು 30 ವರ್ಷದ ಪಿಂಕಿ ಪ್ರಜಾಪತಿ ಅನ್ನೋ ಯುವತಿಯನ್ನು ಪ್ರೀತಿಸಿದ್ದ. ಒಂದಷ್ಟು ಕಮಿಟ್‌ಮೆಂಟ್ ಇದೆ. ಮುಗಿಸಿ ಮದುವೆಯಾಗುತ್ತೇನೆ ಎಂದು ಮಾತು ಕೊಟ್ಟಿದ್ದು. ಹೀಗಾಗಿ ಪಿಂಕಿ ತನ್ನ ಪ್ರಿಯಕರ ಸಂಜಯ್ ಪಾಟೀದಾರ್‌ಗೆ ತನು ಮನ ಧನ ಅರ್ಪಿಸಿದ್ದಳು. ಪಿಂಕಿ, ಸಂಜಯ್‌ಗೆ ಮದುವೆಯಾಗುವಂತೆ ಒತ್ತಾಯಿಸಿದ್ದಳು. ಮದುವೆಯಾಗುವಂತೆ ಒತ್ತಾಯಿಸಿದ್ದರಿಂದ ಸಂಜಯ್ ಪಾಟೀದಾರ್ ಸ್ನೇಹಿತನ ಸಹಾಯ ಪಡೆದು ಈ ಕೃತ್ಯ ಎಸೆಗಿದ್ದಾನೆ.
ಸಂಜಯ್ ಬಾಡಿಗೆ ಪಡೆದಿದ್ದ ಮನೆಯ ಫ್ರಿಡ್ಜ್‌ನಲ್ಲಿ ಮೃತದೇಹವನ್ನಿಟ್ಟಿದ್ದ. ಶ್ರೀವಾಸ್ತವ ಎಂಬುವರಿಂದ ಮನೆಯನ್ನು ಬಾಡಿಗೆ ಪಡೆದಿದ್ದ ಸಂಜಯ್, ವರ್ಷದ ಹಿಂದೆಯೇ ಮನೆ ಬಿಟ್ಟಿದ್ದ. ಆದಾಗ್ಯೂ ಆಗಾಗ ಬಂದು ಹೋಗುವುದನ್ನು ಮಾಡುತ್ತಿದ್ದ. ಅಲ್ಲದೆ, ಕೆಲವು ವಸ್ತುಗಳನ್ನು ಅಧ್ಯಯನ ಕೊಠಡಿ ಮತ್ತು ಮಾಸ್ಟರ್ ಬೆಡ್‌ರೂಮ್‌ನಲ್ಲಿ ಇರಿಸುವುದನ್ನು ಮುಂದುವರೆಸಿದ್ದ. ಹೀಗಾಗಿ ಮನೆ ಮಾಲೀಕರಿಗೂ ಹೆಚ್ಚಿನ ವಿಚಾರ ಗೊತ್ತಿರಲಿಲ್ಲ.
ಇತ್ತೀಚೆಗೆ, ನೆರೆ ಮನೆಯವರು ಅನುಮಾನ ಬಂದು ಮನೆಯ ಬಾಗಿಲು ತೆರೆಯುವಂತೆ ಮಾಲೀಕರನ್ನು ಕೇಳಿದ್ದರು. ಹಾಗೆ ಬಾಗಿಲು ತೆರೆದಾಗ ಪಾಟಿದಾರ್‌ಗೆ ಸಂಬಂಧಿಸಿದ ವಸ್ತುಗಳು ಒಳಗಿದ್ದ ಕಾರಣ ಮತ್ತೆ ಲಾಕ್ ಮಾಡಿದ್ದರು. ಆದರೆ, ಬುಧವಾರದಿಂದ ವಿದ್ಯುತ್ ಸರಬರಾಜನ್ನು ಆಫ್ ಮಾಡಿದ್ದರು. ಇದರಿಂದಾಗಿ ಫ್ರಿಡ್ಜ್‌ನಲ್ಲಿದ್ದ ಮೃತದೇಹದ ವಾಸನೆ ಅಕ್ಕಪಕ್ಕದ ಮನೆಯವರಿಗೆ ಬಂದಿತ್ತು ಎಂದು ಪೊಲೀಸ್ ಅಧಿಕಾರಿ ಅಮಿತ್ ಸೋಲಂಕಿ ಎಂಬವರು ತಿಳಿಸಿದ್ದಾರೆ.
ಸೀರೆಯುಟ್ಟುಕೊಂಡು, ಆಭರಣ ತೊಟ್ಟು, ಅಲಂಕರಿಸಿಕೊಂಡು, ಕುತ್ತಿಗೆಯನ್ನು ತನ್ನ ಕೈಗಳಿಂದ ತಾನೇ ಬಲವಾಗಿ ಬಿಗಿಯಾಗಿ ಕಟ್ಟಿಕೊಂಡು ಕುಳಿತಿರುವ ಸ್ಥಿತಿಯಲ್ಲಿ ಯುವತಿಯ ಮೃತದೇಹ ಪತ್ತೆಯಾಗಿತ್ತು. ಫ್ರಿಡ್ಜ್ ತೆರೆದವರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದರು. ನಂತರ ಭಯಾನಕ ಸತ್ಯ ಬಯಲಾಗಿದೆ.
ಯುವತಿಯನ್ನು 2024ರ ಜೂನ್ ನಲ್ಲೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸಂಜಯ್ ಪಡೆದಿದ್ದ ಬಾಡಿಗೆ ಮನೆಯಿಂದ ದುರ್ವಾಸನೆ ಬರಲು ಆರಂಭಿಸಿದ್ದರಿಂದ ನೆರೆಮನೆಯವರು ಮನೆಯ ಮಾಲೀಕರಿಗೆ ಮಾಹಿತಿ ನೀಡಿದ್ದಾರೆ. ಮನೆ ಮಾಲೀಕ ಬಂದು ನೋಡಿದಾಗ ಮಹಿಳೆಯ ಮೃತದೇಹ ಫ್ರಿಡ್ಜ್‌ನಲ್ಲಿರುವುದು ಗೊತ್ತಾಗಿದೆ ಎಂದು ದೇವಾಸ್ ಪೊಲೀಸ್ ವರಿಷ್ಠಾಧಿಕಾರಿ ಪುನೀತ್ ಗೆಹ್ಲೋಟ್ ಮಾಹಿತಿ ನೀಡಿದ್ದಾರೆ.