ದರೋಡೆ ಮಾಡಲು ಬಂದವನಿಂದ ಬರ್ಬರ ಹತ್ಯೆ! ಒಂಟಿ ಮನೆಯಲ್ಲಿ ನಡೆಯಿತು ಭೀಕರ ಕೃತ್ಯ

0
Spread the love

ಮಂಡ್ಯ: ದರೋಡೆ ಮಾಡಲು ಬಂದವನಿಂದ ಮರ ಕತ್ತರಿಸುವ ಯಂತ್ರದಲ್ಲಿ ಮನೆಯ ಮಾಲೀಕನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕ್ಯಾತನಹಳ್ಳಿಯ ಗ್ರಾಮದಲ್ಲಿ ನಡೆದಿದೆ. ರಮೇಶ್ ಕೊಲೆಯಾದ ದುರ್ದೈವಿಯಾಗಿದ್ದು, ಕ್ಯಾತನಹಳ್ಳಿಯ ರಮೇಶ್ ಎಂಬುವವರ ತೋಟದ ಮನೆಗೆ ಅನಾಮಧೇಯ ವ್ಯಕ್ತಿ ಸಂಜೆ ಬಂದಿದ್ದಾನೆ.

Advertisement

ಈ‌ ವೇಳೆ ರಮೇಶ್ ಪತ್ನಿ ಹಾಗೂ ರಮೇಶ್ ಮನೆಯ ಒಳ ಭಾಗದಲ್ಲಿ ಇದ್ದು, ಅವರ ಮಗ ಸಂತೋಷ್ ಹಾಲನ್ನು ಡೈರಿಗೆ ಹಾಕಲು ತೆರಳಿದ್ದ. ಆಗ ಮನೆಯ ಬಾಗಿಲು ತಟ್ಟಿದ ಶಬ್ಧ ಕೇಳಿ, ಯಶೋಧಮ್ಮ ಮನೆಯ ಬಾಗಿಲನ್ನು ತೆರೆಯುತ್ತಾರೆ. ನಂತರ ಅಪರಿಚಿತ ವ್ಯಕ್ತಿ ಬ್ಯಾಗ್ ತೆಗೆದು ಮರ ಕತ್ತರಿಸುವ ಯಂತ್ರ ತೆಗೆದು ನಿಮ್ಮ‌ ಮನೆಯಿಂದ ಆರ್ಡರ್‌ ಬಂದಿತ್ತು ತಗೋಳಿ ಎನ್ನುತ್ತಾನೆ.

ಈ ವೇಳೆ‌ ಯಶೋಧಮ್ಮ ನಾವು ಯಾವ ಆರ್ಡರ್ ಮಾಡಿಲ್ಲ ಹೋಗಿ ಎಂದು ಆತನನ್ನು ಕಳಿಸಲು ಮುಂದಾಗುತ್ತಾರೆ. ಈ ವೇಳೆ, ಆ ಕಿರಾತಕ ಮರ ಕತ್ತರಿಸುವ ಯಂತ್ರವನ್ನು ಆನ್ ಮಾಡಿ ಯಶೋಧಮ್ಮ ಮುಖದ ಭಾಗಕ್ಕೆ ಹಿಡಿದಿದ್ದಾನೆ. ಅವರ ಕೆನ್ನೆ ಕೊಯ್ದು ರಕ್ತ ಚಲ್ಲುತ್ತದೆ, ನಂತರ ಯಶೋಧಮ್ಮ ಪ್ರಜ್ಞೆ ತಪ್ಪಿ ಬೀಳುತ್ತಾರೆ. ಬಳಿಕ ಮನೆಯ ಒಳ ಭಾಗಕ್ಕೆ ಹೋಗಿ ಮಲಗಿದ್ದ ರಮೇಶ್ ಅವರ ಕುತ್ತಿಗೆಗೆ ಮರ ಕತ್ತರಿಸುವ ಯಂತ್ರವನ್ನು ಹಿಡಿಯುತ್ತಾನೆ. ನಂತರ ರಮೇಶ್ ಕೈ ಭಾಗಕ್ಕೆ ಎಲ್ಲಾ ಹಿಡಿದು ಬರ್ಬರವಾಗಿ ಹತ್ಯೆ ಮಾಡುತ್ತಾನೆ.

ಈ‌ ವೇಳೆ ಪ್ರಜ್ಞೆ ತಪ್ಪಿದ್ದ ಯಶೋಧಮ್ಮ ಎಚ್ಚರಗೊಂಡು ಮನೆಯ ಬಾಗಿಲನ್ನು ಹೊರಗಡೆಯಿಂದ ಲಾಕ್ ಮಾಡಿ, ನಂತರ ಸ್ಥಳೀಯರನ್ನು ಕರೆಯುತ್ತಾರೆ. ಈ ವೇಳೆ ಮರ ಕತ್ತರಿಸುವ ಯಂತ್ರದ ಮೂಲಕ ಬಾಗಿಲನ್ನು ಕೊಯ್ಯಲು ಸಹ ಆತ ಯತ್ನಿಸಿದ್ದಾನೆ. ಆತನನ್ನು ಹಿಡಿದು ಸ್ಥಳೀಯರು ಧರ್ಮದೇಟು ಕೊಟ್ಟಿದ್ದಾರೆ. ಬಳಿಕ ಆತನನ್ನು ಪೊಲೀಸರ ವಶಕ್ಕೆ ನೀಡಿದ್ದಾರೆ. ಯಶೋಧಮ್ಮ ಅವರಿಗೆ ಮೈಸೂರು ಕೆಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


Spread the love

LEAVE A REPLY

Please enter your comment!
Please enter your name here