ಮಡಿಕೇರಿ: ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ಲಿವಿಂಗ್ ಟುಗೆದರ್‌ನಲ್ಲಿದ್ದ ವ್ಯಕ್ತಿ ಆತ್ಮಹತ್ಯೆಗೆ ಶರಣಾದ ಘಟನೆ ಜರುಗಿದೆ. ಸಾಗರ್ (30) ಮೃತ ವ್ಯಕ್ತಿ. ಮೃತ ಸಾಗರ್ ಸೆಸ್ಕಾಂನಲ್ಲಿ ವಿದ್ಯುತ್ ಕಂಬ ಅಳವಡಿಸುವ ಕೆಲಸ ಮಾಡುತಿದ್ದ. ಅಲ್ಲದೇ ಆಟೋ ಚಾಲನೆ ಮಾಡುತಿದ್ದ.
ಈತ ಮಹಿಳೆಯೊಬ್ಬರ ಜೊತೆ, ಗಾಂಧಿನಗರದಲ್ಲಿ ಬಾಡಿಗೆ ಮನೆಯಲ್ಲಿ ಸುಮಾರು 18 ವರ್ಷಗಳಿಂದ ಜೀವನ ನಡೆಸುತಿದ್ದ. ಈತನಿಗೆ ಕುಡಿತದ ಚಟವು ಇತ್ತು. ಎರಡು ದಿನಗಳ ಹಿಂದೆ ಸಾಗರ್ ಮತ್ತು ಮಹಿಳೆಯ ಮಧ್ಯೆ ಕಲಹ ನಡೆದಿತ್ತು.
ಇದರಿಂದ ಎರಡು ದಿನಗಳ ಹಿಂದೆ ಮನನೊಂದು ಕೇರಳದ ಕೊಟ್ಟಿಯೂರು ದೇವಾಲಯಕ್ಕೆ ಒಬ್ಬನೇ ತೆರಳಿ ನಂತರ ಮನೆಗೆ ಸಂಜೆ 6ರ ವೇಳೆಗೆ ಹಿಂದಿರುಗಿದ್ದ. ಮನೆಗೆ ಬಂದ ವೇಳೆ ಮನೆಯಲ್ಲಿ ಯಾರು ಇಲ್ಲದೇ ಇರುವುದನ್ನು ಗಮನಿಸಿ ಮಹಿಳೆಗೆ ಹಲವು ಸಲ ಕರೆ ಮಾಡಿದ್ದಾನೆ.
ಮಹಿಳೆಯಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ, ಆಕೆ ನನ್ನಿಂದ ದೂರವಾಗಿದ್ದಾಳೆ ಎಂದು ಭಾವಿಸಿ, ವೀಡಿಯೋ ಮಾಡಿಟ್ಟು ನೇಣಿಗೆ ಶರಣಾಗಿದ್ದಾನೆ.
ಮಹಿಳೆ ಗಲಾಟೆ ವೇಳೆ, ಪೆಟ್ಟು ತಿಂದು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಳು. ಮಹಿಳೆಯ ಮಗ ಆಧಾರ್ ಕಾರ್ಡ್ ತರಲೆಂದು ಮನೆಗೆ ಬಂದು ನೋಡಿದಾಗ ನೇಣಿಗೆ ಶರಣಾಗಿರುವುದು ಗೊತ್ತಾಗಿದೆ.