ಚಿಕ್ಕಬಳ್ಳಾಪುರ: ಜಿಲ್ಲೆಯ ಗುಂಡ್ಲುಗುರ್ಕಿ ಗ್ರಾಮದಲ್ಲಿ ವ್ಯಕ್ತಿಯೊಬ್ಬರು ಮನೆಯಲ್ಲಿ ಕಿಟಕಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಪ್ರಕರಣ ಹಲವು ಅನುಮಾನಗಳಿಗೆ ಕಾರಣವಾಗಿದೆ. ಚಿಕ್ಕಬಳ್ಳಾಪುರ ತಾಲೂಕಿನ ಗುಂಡ್ಲುಗುರ್ಕಿ ಗ್ರಾಮದ ನಿವಾಸಿ ಮುನಿರಾಜು (42) ಮೃತಪಟ್ಟ ವ್ಯಕ್ತಿ. ಮನೆಯಲ್ಲಿ ಕಿಟಕಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.
ಮುನಿರಾಜು ಅವರ ಪತ್ನಿ ಸುನಿತಾ ವಿರುದ್ಧ ಅಕ್ರಮ ಸಂಬಂಧದ ಆರೋಪ ಕೇಳಿಬರುತ್ತಿದೆ. ಪತ್ನಿ ಪದೇಪದೇ ಮನೆಬಿಟ್ಟು ಬೇರೊಬ್ಬರ ಜೊತೆ ಹೋಗುತ್ತಿದ್ದಾಳೆ ಎಂಬ ಕಾರಣದಿಂದ ಮುನಿರಾಜು ಬೇಸರಗೊಂಡಿದ್ದರೆಂದು ಹೇಳಲಾಗುತ್ತಿದೆ.
ಈ ವಿಚಾರವಾಗಿ ಫೆಬ್ರವರಿ 27ರ ಮಧ್ಯರಾತ್ರಿ ಒಂದು ಗಂಟೆಯವರೆಗೂ ಸ್ಥಳೀಯರು ಹಾಗೂ ಪತ್ನಿಯ ಸಂಬಂಧಿಕರು ನ್ಯಾಯ ಪಂಚಾಯಿತಿ ನಡೆಸಿದ್ದರು ಎನ್ನಲಾಗಿದೆ. ಪಂಚಾಯಿತಿಯ ಬಳಿಕವೇ ಮುನಿರಾಜು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವುದು ಪ್ರಕರಣಕ್ಕೆ ಇನ್ನಷ್ಟು ತಿರುವು ನೀಡಿದೆ.
ಮುನಿರಾಜು ಆತ್ಮಹತ್ಯೆ ಮಾಡಿಕೊಂಡರೋ ಅಥವಾ ಇದರಲ್ಲಿ ಬೇರೆ ಏನಾದರೂ ಶಂಕಾಸ್ಪದ ಅಂಶಗಳಿವೆಯೋ ಎಂಬುದರ ಕುರಿತು ಸ್ಪಷ್ಟತೆ ಇಲ್ಲ. ಪತ್ನಿಯೇ ಸಾವಿಗೆ ಕಾರಣವೇ ಎಂಬ ಅನುಮಾನವೂ ವ್ಯಕ್ತವಾಗಿದೆ.
ಘಟನೆ ಕುರಿತು ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ. ಪೋಸ್ಟ್ಮಾರ್ಟಂ ವರದಿ ಮತ್ತು ತನಿಖೆಯ ಬಳಿಕವೇ ಸಾವಿನ ನಿಖರ ಕಾರಣ ತಿಳಿಯಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.



