ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ತಾಲೂಕಿನ ಕುಂದ್ರಳ್ಳಿ ತಾಂಡಾ ಮತ್ತು ಗ್ರಾಮದಲ್ಲಿ ಇತ್ತೀಚೆಗೆ ಹುಚ್ಚು ನಾಯಿಗಳ ಹಾವಳಿಯಿಂದ ಅನೇಕ ಜನರು ಗಾಯಗೊಳ್ಳುತ್ತಿರುವ ಘಟನೆಗಳು ನಡೆಯುತ್ತಿವೆ. ಇದರಿಂದ ಜನರು ಬೆಚ್ಚಿಬೀಳುವಂತಾಗಿದ್ದು, ಈ ಹಿನ್ನೆಲೆಯಲ್ಲಿ ಜಿ.ಪಂ ಗದಗ, ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಗದಗ ಇವರ ಆಶ್ರಯದಲ್ಲಿ ತಾಲೂಕಾ ಪಶುವೈದ್ಯಾಧಿಕಾರಿ ಡಾ. ಎನ್.ಎಚ್. ಓಲೇಕಾರ ಮತ್ತು ಪಶುವೈದ್ಯಾಧಿಕಾರಿ ಡಾ.ಏಕನಾಥ ಮುಧೋಳಕರ ಅವರ ನೇತೃತ್ವದ ತಂಡ ಕುಂದ್ರಳ್ಳಿ ಗ್ರಾಮ ಮತ್ತು ತಾಂಡಾಗಳಿಗೆ ಭೇಟಿ ನೀಡಿ ರೇಬೀಸ್ ರೋಗದ ಬಗ್ಗೆ ಅರಿವು ಮೂಡಿಸುವದು, ರೇಬೀಸ್ ಲಸಿಕೆ, ಚುಚ್ಚುಮದ್ದು ಹಾಕುವ ಕಾರ್ಯವನ್ನು ಶನಿವಾರ ನಡೆಸಿದರು.
ಅಲ್ಲಲ್ಲಿ ಜನರನ್ನು ಸೇರಿಸಿ ಹುಚ್ಚು ನಾಯಿಯ ಲಕ್ಷಣಗಳು ಮತ್ತು ರೇಬೀಸ್ ರೋಗದ ಲಕ್ಷಣಗಳ ಕುರಿತು ಸಭೆಗಳನ್ನು ನಡೆಸಿ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಡಾ. ಎನ್.ಎಚ್. ಓಲೇಕಾರ ಮಾತನಾಡಿ, ಕುಂದ್ರಳ್ಳಿ ಭಾಗದಲ್ಲಿ ಗುಡ್ಡುಗಾಡು ಮತ್ತು ಅರಣ್ಯ ಪ್ರದೇಶಗಳಿಂದ ಬರುವ ತೋಳ ಮತ್ತು ನರಿಗಳು ನಾಯಿಗಳಿಗೆ ಕಚ್ಚುವದರಿಂದ ಅವುಗಳಿಗೆ ಹುಚ್ಚು ರೋಗ ಉಂಟಾಗುತ್ತದೆ. ಅವುಗಳು ಮತ್ತೆ ಇತರೆ ನಾಯಿಗಳಿಗೆ ಕಚ್ಚುವದರಿಂದ ಇದು ಹೆಚ್ಚುತ್ತಾ ಹೋಗುತ್ತದೆ. ಇವುಗಳು ಮನುಷ್ಯನಿಗೆ ಕಚ್ಚಿದಾಗ ರೇಬೀಸ್ ರೋಗ ಬರುತ್ತಿದ್ದು, ರೇಬೀಸ್ ವೈರಾಣುವಿನಿಂದ ಮತ್ತು ಹುಚ್ಚು ಪ್ರಾಣಿಗಳ ಕಡಿತದಿಂದ ಹರಡುವ ಒಂದು ಮಾರಣಾಂತಿಕ ರೋಗವಾಗಿದೆ. ಈ ರೋಗಕ್ಕೆ ತಕ್ಷಣದಲ್ಲಿ ಚಿಕಿತ್ಸೆ ದೊರೆಯದಿದ್ದಲ್ಲಿ ರೇಬೀಸ್‌ನಿಂದ ಸಾವು ಸಂಭವಿಸುತ್ತದೆ ಎಂದು ವಿವರಿಸಿದರು.
ರೇಬೀಸ್‌ನಿಂದ ನರಳುತ್ತಿರುವ ಪ್ರಾಣಿಗಳು ಜನರಿಗೆ ಕಚ್ಚಿದಾಗ ವೈರಾಣುಗಳು ದೇಹದೊಳಗೆ ಪ್ರವೇಶಿಸಿ ರೇಬೀಸ್ ರೋಗ ಉಂಟು ಮಾಡುತ್ತವೆ. ಗ್ರಾಮದಲ್ಲಿ ಅನೇಕ ದಿನಗಳಿಂದ ಇಂತಹ ಘಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಜನರಲ್ಲಿ ಈ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಇಲಾಖೆ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದರು.
ಈ ಸಂದರ್ಭದಲ್ಲಿ ಪಶುವೈದ್ಯಾಧಿಕಾರಿ ಡಾ.ಏಕನಾಥ ಮುಧೋಳಕರ, ಗ್ರಾ.ಪಂ ಅಧ್ಯಕ್ಷೆ ಶಾಂತವ್ವ ಹಡಪದ, ಮಂಜುನಾಥ ಕಳಸದ, ರುದ್ರಯ್ಯ ಶೀಲವಂತರಮಠ, ಹಾಲಪ್ಪ ಹಳ್ಳಿಕೇರಿ, ಪರಮೇಶ ಹಂಗನಕಟ್ಟಿ, ಮಂಜುನಾಥ ಗೌರಿ, ಕಾರ್ಯದರ್ಶಿ ಸುರೇಶ ಹಡಪದ ಹಾಗೂ ಪಶು ವೈದ್ಯಕೀಯ ಇಲಾಖೆ ಸಿಬ್ಬಂದಿಗಳು, ಗ್ರಾ.ಪಂ ಸದಸ್ಯರು, ಆಶಾ ಕಾರ್ಯಕರ್ತೆಯರು, ಗ್ರಾಮಸ್ಥರು ಇದ್ದರು.
ರೇಬಿಸ್ ಲಸಿಕೆಯನ್ನು ಕಡ್ಡಾಯವಾಗಿ ತೆಗೆದುಕೊಳ್ಳಬೇಕು, ಹುಚ್ಚು ನಾಯಿ ಕಡಿತಕ್ಕೊಳಗಾದ ವ್ಯಕ್ತಿ ಅಥವಾ ದನಕರುಗಳಿಗೆ 1, 7, 14 ಮತ್ತು 28ನೇ ದಿನಗಳಿಂದು ತಪ್ಪದೆ ರೇಬೀಸ್ ಲಸಿಕೆ ಹಾಕಿಸಬೇಕು. ರೋಗದ ಬಗ್ಗೆ ಜನರು ನಿರ್ಲಕ್ಷö್ಯ ವಹಿಸದೆ ಸರಿಯಾದ ಚಿಕಿತ್ಸೆ ಪಡೆದುಕೊಳ್ಳುವದರ ಜೊತೆಗೆ ಹುಚ್ಚು ನಾಯಿಗಳು ಗ್ರಾಮದಲ್ಲಿ ಕಂಡು ಬಂದರೆ ಅದಕ್ಕೆ ಸೂಕ್ತ ಕ್ರಮಗಳನ್ನು ಅನುಸರಿಸುವಂತೆ ಡಾ. ಎನ್.ಎಚ್. ಓಲೇಕಾರ ಸಲಹೆ ನೀಡಿದರು.