ವಿಜಯಪುರ: ಯುವಕ ಚುಡಾಯಿಸುತ್ತಿದ್ದಕ್ಕೆ ಮನನೊಂದು ಅಪ್ರಾಪ್ತ ಬಾಲಕಿ ನೇಣಿಗೆ ಶರಣಾಗಿರುವ ಘಟನೆ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸಂಗಮೇಶ ಜುಂಜವಾರ ಎಂಬಾತನಿಂದ ಅಪ್ರಾಪ್ತೆಗೆ ಕಿರುಕುಳ ನೀಡಲಾಗುತ್ತಿದ್ದು, ಪ್ರೀತಿ ಪ್ರೇಮದ ಹೆಸರಿನಲ್ಲಿ ಶಾಲೆ ತೆರಳುತ್ತಿದ್ದ ವೇಳೆ ಹಿಂಬಾಲಿಸಿ ಬಾಲಕಿಯನನ್ನು ಚುಡಾಯಿಸುತ್ತಿದ್ದನು. ಇತ್ತೀಚೆಗೆ ಬಾಲಕಿ ಕಾಲೇಜಿಗೆ ಹೋಗುವಾಗ ಮೈ-ಕೈ ಮುಟ್ಟಿ ಮಾತನಾಡಿಸಿದ್ದನು.
ನಿನ್ನ ಪ್ರೀತಿಸುವೆ, ನೀನು ನನ್ನ ಪ್ರೀತಿಸು ಎಂದು ಬಲವಂತ ಮಾಡಿದ್ದನು. ಇದನ್ನು ಪ್ರಶ್ನೆ ಮಾಡಿದ್ದ ಬಾಲಕಿಯ ಸಹೋದರಿಗೆ ಸಂಗಮೇಶ ಜೀವ ಬೆದರಿಕೆ ಹಾಕಿ ಹಲ್ಲೆ ಮಾಡಿದ್ದನು ಎಂಬ ಆರೋಪವಿದೆ. ಈ ಕುರಿತು ಬಾಲಕಿ ನವೆಂಬರ್ 27 ರಂದು ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಸಂಗಮೇಶ ಜುಂಜವಾರ, ಮೌನೇಶ ಮಾದರ, ಚಿದಾನಂದ ಕಟ್ಟಿಮನಿ ವಿರುದ್ಧ ದೂರು ನೀಡಿದ್ದಳು.
ಬಾಲಕಿ ದೂರಿನ ಆಧಾರದ ಮೇಲೆ, ಮುದ್ದೇಬಿಹಾಳ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದರು. ಪ್ರಮುಖ ಆರೋಪಿಗಳಾದ ಸಂಗಮೇಶ ಜುಂಜವಾರ, ಮೌನೇಶ ಮಾದರನನ್ನು ಬಂಧಿಸಿದ್ದರು. ಆದರೆ, ಇದೆಲ್ಲದ್ದರಿಂದ ನೊಂದ ಬಾಲಕಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸಾವಿಗೆ ಶರಣಾಗಿದ್ದಕ್ಕೆ ಬಾಲಕಿ ಸಮಾಜದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.