ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಸಮೀಪದ ಗೋವನಾಳ ಗ್ರಾಮದಲ್ಲಿ ಅಲ್ಲಲ್ಲಿ ಕಂಡುಬರುವ ಕಸದ ರಾಶಿ, ಸರಾಯಿ ಪಾಕೀಟುಗಳ ರಾಶಿ ಕಣ್ಣಿಗೆ ರಾಚುವಂತಿದ್ದು, ನಿರ್ವಹಣೆ ಕೊರತೆಯಿಂದ ಜನರು ಆಡಳಿತವನ್ನು ಶಪಿಸುವಂತಾಗಿದೆ.
ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಗ್ರಾಮದ ಬಸ್ ತಂಗುದಾಣದಲ್ಲಿ ನಿತ್ಯ ಹಲವಾರು ಜನರು ಕುಡಿತಕ್ಕಾಗಿ ಕುಳಿತುಕೊಳ್ಳಲು ಉಪಯೋಗಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ನಿತ್ಯ ಬೇರೆಡೆಯಿಂದ ತಂದ ಮದ್ಯದ ಟೆಟ್ರಾ ಪಾಕೀಟುಗಳನ್ನು ಖಾಲಿ ಜಾಗೆಗಳಲ್ಲಿ, ಬಸ್ ನಿಲ್ದಾಣ, ಕುಡಿಯುವ ನೀರಿನ ಘಟಕ, ಶಾಲಾ ಮೈದಾನ ಇತ್ಯಾದಿಗಳಲ್ಲಿ ಕುಡಿದು ಅಲ್ಲಿಯೇ ಎಸೆದು ಹೋಗುತ್ತಿರುವದು ಕಂಡು ಬರುತ್ತಿದೆ.
ಈ ಬಸ್ ತಂಗುದಾಣದ ನಿರ್ವಹಣೆ ಮಾಡಲು ಗ್ರಾ.ಪಂ ಯಾವುದೇ ಸರಿಯಾದ ಕ್ರಮಗಳನ್ನು ಕೈಗೊಳ್ಳದಿರುವದು ಗ್ರಾಮಸ್ಥರ ಅಸಮಾಧಾನಕ್ಕೆ ಕಾರಣವಾಗಿದೆ. ಗ್ರಾ.ಪಂನಲ್ಲಿ ಮೊದಲು ಸ್ವಚ್ಛತೆಗಾಗಿ ಕಾರ್ಮಿಕರನ್ನು ನೇಮಿಸಿಕೊಂಡಿದ್ದರು. ಆದರೆ ಕಾರಣಾಂತರಗಳಿಂದ ಅವರು ಈ ಕಾರ್ಯವನ್ನು ಬಿಟ್ಟು ಹೋಗಿರುವದರಿಂದ ಗ್ರಾಮದಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ಗ್ರಾ.ಪಂನಿಂದ 10-15 ದಿನಗಳಿಗೆ ಒಮ್ಮೆ ಕೂಲಿಯಾಳುಗಳಿಂದ ಸ್ವಚ್ಛತೆಯನ್ನು ಮಾಡಿಸುತ್ತಿದ್ದಾರೆ ಎನ್ನಲಾಗುತ್ತಿದೆ.
ಇಂತಹ ಮುಖ್ಯ ಸ್ಥಳದಲ್ಲಿ ಈ ರೀತಿ ಕಸ ಸಂಗ್ರಹವಾಗುತ್ತಿರುವದು ಅಸಹ್ಯ ಮೂಡಿಸುವಂತಿದೆ. ಈ ಕುರಿತಂತೆ ಗ್ರಾ.ಪಂ ಆಡಳಿತ ಮಂಡಳಿ ವಿಶೇಷ ಕಾಳಜಿವಹಿಸಿ, ಗ್ರಾಮದ ಸ್ವಚ್ಛತೆಗೆ ಕಾರ್ಯಕ್ಕೆ ಆದ್ಯತೆ ನೀಡಲಿ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.