ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯ ಸರ್ಕಾರ ಉತ್ತರ ಕರ್ನಾಟಕದ ಶಕ್ತಿ ಕೇಂದ್ರವಾದ ಬೆಳಗಾವಿಯಲ್ಲಿ ಕಾಟಾಚಾರಕ್ಕೆ ಅಧಿವೇಶನ ನಡೆಸುತ್ತಿದೆ. ಕನಿಷ್ಠ 20 ದಿನಗಳ ಕಾಲ ಅಧಿವೇಶನ ನಡೆಸಬೇಕೆಂದು ಬಿಜೆಪಿ ಯುವ ಮೋರ್ಚಾ ಗದಗ ಜಿಲ್ಲಾಧ್ಯಕ್ಷ ಸಂತೋಷ ಅಕ್ಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಹಾಲಿ ಶಾಸಕರು ಮೃತಪಟ್ಟ ಕಾರಣ ಒಂದು ದಿನ ಅಧಿವೇಶನ ನಡೆಯುವುದಿಲ್ಲ, ಕಾಂಗ್ರೆಸ್ ಪಕ್ಷ ತನ್ನ ಮರ್ಜಿಗೋಸ್ಕರ ಮಸೂದೆ ಅಂಗೀಕಾರಕ್ಕೆ ಈ ಅಧಿವೇಶನವನ್ನು ಬಳಸಿಕೊಳ್ಳುತ್ತಿದೆ. ಬೆಂಗಳೂರಿನ ವಿಚಾರಗಳನ್ನೇ ಬೆಳಗಾವಿಯಲ್ಲಿ ಕೈಗೆತ್ತಿಕೊಳ್ಳುವುದಾದರೆ ಉತ್ತರ ಕರ್ನಾಟಕದಲ್ಲಿ ಅಧಿವೇಶನ ನಡೆಸುವ ಔಚಿತ್ಯವೇನು? ಹಿಂದೆ ಕುಮಾರಸ್ವಾಮಿ, ಯಡಿಯೂರಪ್ಪ ಮುಖ್ಯಮಂತ್ರಿಗಳಾಗಿದ್ದಾಗ ಅಲ್ಲೊಂದು ಭವನ ಆಗಬೇಕು, ಉತ್ತರ ಕರ್ನಾಟಕದ ಚರ್ಚೆ ಆಗಬೇಕೆಂದು ಅಧಿವೇಶನ ಮಾಡುತ್ತಿದ್ದರು. 20 ದಿನವಾದರೂ ಬೆಳಗಾವಿಯಲ್ಲಿ ಅಧಿವೇಶನ ನಡೆಸಿ, ಇಲ್ಲಿನ ಸಮಸ್ಯೆಗಳನ್ನು ಚರ್ಚಿಸಿ ಎಂದು ಆಗ್ರಹಿಸಿದ್ದಾರೆ.
ಉತ್ತರ ಕರ್ನಾಟಕದ ವಿಚಾರವನ್ನು ಕೊನೆಗೆ ಪರಿಗಣಿಸುತ್ತಾರೆ. ಹಿಂದಿನ ಅಧಿವೇಶನದಲ್ಲಿ ಕೊನೆಯಲ್ಲಿ ಮುಖ್ಯಮಂತ್ರಿ ಸುಮ್ಮನೇ ಭಾಷಣ ಮಾಡಿ ಹೋಗಿದ್ದರು. ಕೈಗಾರಿಕೆ ಸ್ಥಾಪನೆ, ಶಾಲಾರಂಭ, ನೀರಾವರಿ ಯೋಜನೆಗೆ ಹಣದ ವಿಚಾರದಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗುತ್ತಲೇ ಬಂದಿದೆ ಎಂದು ದೂರಿದ್ದಾರೆ.



