ಕಲಿಯುಗದ ಕಾಮಧೇನು, ಕಲ್ಪವೃಕ್ಷ ಶ್ರೀಗುರು ರಾಘವೇಂದ್ರ ಸ್ವಾಮಿಗಳ ಮಹಿಮೆ ಅಪಾರ. ಭಕ್ತವತ್ಸಲಾಗಿರುವ ಅವರ ತಮ್ಮ ಮಾತೃಭಾವದ ಅಂತಃಕರಣ ಶಕ್ತಿಯಿಂದ ಇಂದಿಗೂ ಭಕ್ತರ ಉದ್ಧಾರ ಮಾಡುತ್ತಿದ್ದಾರೆ. ಅಂತಹ ಶ್ರೀಗುರು ರಾಘವೇಂದ್ರ ಯತಿಗಳ ಜೀವನದ ಸಂಧ್ಯಾಕಾಲದ ದಿನಗಳನ್ನು ಹಾಗೂ ರಾಯರ ವೃಂದಾವನದಲ್ಲಿ ನೆಲೆನಿಂತ ನಂತರದ ಪವಾಡ ಮಹಿಮಾ ದೃಶ್ಯಗಳನ್ನು `ದಾಸಚಿಂತನಮಣಿ’ ಪ್ರಶಸ್ತಿ ಪುರಸ್ಕೃತರಾದ ಹಿರಿಯ ರಂಗಕರ್ಮಿ ಫಣೀಂದ್ರಾಚಾರ್ಯ ದ್ಯಾಮೇನಹಳ್ಳಿಯವರು `ಧೀರ ಶ್ರೀರಾಘವೇಂದ್ರ ವೃತಿವರ’ ಎಂಬ ಸಂಗೀತ ರೂಪಕಕ್ಕೆ ಅಳವಡಿಸಿದ್ದು, ಅದು ಇತ್ತೀಚೆಗೆ ರಾಯರ ಆರಾಧನೆಯ ಸಂದರ್ಭದಲ್ಲಿ ಗದುಗಿನ ಕರಿಯಮ್ಮಕಲ್ಲು ಬಡಾವಣೆಯಲ್ಲಿರುವ ಶ್ರೀಗುರು ರಾಘವೇಂದ್ರ ಸ್ವಾಮಿಗಳ ಶ್ರೀಮಠದಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಂಡು ಪ್ರೇಕ್ಷಕರನ್ನು ಭಕ್ತಿಭಾವದಲ್ಲಿ ತೇಲಿಸಿತು.
ಬ್ರಹ್ಮದೇವರ ಪರಿಚಾರಕನಾದ ಶಂಕುಕರ್ಣನು ವಿವಿಧ ಅವತಾರಗಳನ್ನು ತಾಳಿ ಭಕ್ತರನ್ನು ಉದ್ಧರಿಸುತ್ತಾ ಸಾಗಿ ಕೊನೆಯ ಅವತಾರದಲ್ಲಿ ಶ್ರೀಗುರು ರಾಘವೇಂದ್ರ ಸ್ವಾಮಿಗಳಾಗಿ ಭಕ್ತರ ಸಾರೋದ್ಧಾರಗೈಯುತ್ತಾರೆ. ಪ್ರಸ್ತುತ ಸಂಗೀತ ರೂಪಕವು ರಾಘವೇಂದ್ರ ಸ್ವಾಮಿಗಳ ವಿವಿಧ ಪವಾಡಗಳು ಹಾಗೂ ಮಹಿಮೆಗಳನ್ನೊಳಗೊಂಡಿದೆ. ನವಾಬನು ಅಭಕ್ಷಭೋಜ್ಯಗಳಾದ ಮಾಂಸ ಮೊದಲಾದಿಗಳನ್ನು ನೀಡಿ ರಾಯರನ್ನು ಪರೀಕ್ಷಿಸಲು ಬಂದಾಗ ಅವು ಚಮತ್ಕಾರಿಕ ರೀತಿಯಲ್ಲಿ ಹಣ್ಣು-ಹಂಪಲುಗಳಾಗಿ ಪರಿವರ್ತಿತವಾಗುತ್ತವೆ. ಮುಂದೆ ರಾಯರ ದಾಸಾನುದಾಸ ಸದ್ಭಕ್ತನಾಗಿ ಪರಿವರ್ತನೆ ಹೊಂದಿದ ನವಾಬನು ಅವರಿಗೆ ಮಂಚಾಲೆ ಪರಿಸರವನ್ನು ದಾನವನ್ನಾಗಿ ನೀಡುತ್ತಾನೆ. ಶ್ರೀಗುರು ರಾಘವೇಂದ್ರ ರಾಯರು ಮುಂದೆ ಅಲ್ಲಿಯೇ ವೃಂದಾವನಸ್ಥರಾಗುವ ಆಶಯವನ್ನು ವ್ಯಕ್ತಪಡಿಸುತ್ತಾರೆ. ಬೃಂದಾವನ ನಿರ್ಮಾಣ, ನಂತರದ ಶ್ರೀ ರಾಯರ ಮಹಿಮಾಪೂರಿತ ಘಟನೆಗಳು ಅತ್ಯಂತ ಹೃದಯಸ್ಪರ್ಶಿಯಾಗಿ ಸಂಗೀತ ರೂಪಕದಲ್ಲಿ ಹರಳುಗಟ್ಟಿವೆ.
ಬಳ್ಳಾರಿಯ ವಿಭಾಗದ ಆಂಗ್ಲ ಅಧಿಕಾರಿ ಮೇಜರ್ ಮನ್ರೂ ಎಂಬುವವನು ಮಂತ್ರಾಲಯವನ್ನು ಬ್ರಿಟಿಷರ ಆಡಳಿತಕ್ಕೆ ಒಳಪಡಿಸಬೇಕೆಂದು ಧಾವಿಸಿ ಬಂದಾಗ ಅವನೊಂದಿಗೆ ಆಂಗ್ಲ ಭಾಷೆಯಲ್ಲಿ ಮಾತನಾಡಿ ಮಂತ್ರಾಕ್ಷತೆಯನ್ನು ಕೊಟ್ಟು ಕಳಿಸುತ್ತಾರೆ. ಆತ ದಿಗ್ಬ್ರಾಂತನಾಗಿ ಈ ಗುರುಗಳು ಸಾಮಾನ್ಯರಲ್ಲ ಎಂದು ಅರಿತು ಮಂತ್ರಾಲಯ ವಶಪಡಿಸಿಕೊಳ್ಳುವ ವಿಚಾರವನ್ನು ತ್ಯಜಿಸಿ ದೀರ್ಘಪ್ರಣಾಮ ಸಲ್ಲಿಸಿ ಹೋಗುತ್ತಾನೆ. ಈ ಘಟನೆ ಬಳ್ಳಾರಿ ಗೆಜೆಟ್ನಲ್ಲಿ ದಾಖಲಾಗಿದೆ. ಹೀಗೆ ಅಗಣಿತ ಮಹಿಮೆಗಳನ್ನು ಹೊಂದಿದ ರಾಯರ ಕೆಲವು ಅಪರೂಪದ ಪವಾಡ ಸದೃಶ್ಯ ಘಟನೆಗಳನ್ನು ಸಂಗೀತ ರೂಪಕದಲ್ಲಿ ದೃಶ್ಯೀಕರಣಗೊಂಡಿವೆ. ಶ್ರೀ ಗುರು ರಾಯರ ಮಂತ್ರಾಕ್ಷತೆಯ ಮಹಿಮೆಯನ್ನು ಸಾರುವ ಸ್ವಾಮಿರಾಯರ ಘಟನೆ, ವಿಕಲಚೇತನ ನೃತ್ಯಗಾರ್ತಿ ಮತ್ತೆ ಗುಣಮುಖಳಾಗುವುದು ಹೀಗೆ ಅನೇಕ ಮನೋಜ್ಞ ಘಟನೆಗಳು ಭಾವಪೂರ್ಣವಾಗಿ ಮೂಡಿಬಂದಿವೆ.
ಹಿರಿಯ ರಂಗಕರ್ಮಿಗಳಾದ ಫಣೀಂದ್ರಾಚಾರ್ಯ ದ್ಯಾಮೇನಹಳ್ಳಿ ಈ ನಾಟಕವನ್ನು ರಚಿಸಿ, ನಿರ್ದೇಶಿಸಿ, ಸಂಗೀತ ಸಂಯೋಜನೆ ಮಾಡಿದ್ದಾರೆ. ಇಡೀ ನಾಟಕದಲ್ಲಿ ರಾಘವೇಂದ್ರ ಸ್ವಾಮಿಗಳಾಗಿ ಹಿರಿಯ ರಂಗಭೂಮಿ ಕಲಾವಿದ ಹಾಗೂ ಪತ್ರಕರ್ತ ಮೌನೇಶ ಬಡಿಗೇರ ಪ್ರೇಕ್ಷಕರ ಹೃನ್ಮನ ಸೂರೆಗೊಳ್ಳುತ್ತಾರೆ. ಭಾವುಕ ಭಕ್ತರ ಕಣ್ಣುಗಳಲ್ಲಿ ಆನಂದಾಶ್ರುಗಳು ಬರುವಂತೆ ರಾಯರ ವೃಂದಾವನಸ್ಥರಾಗಿ ಘಟನೆಗಳು ಅಭಿನಯದಲ್ಲಿ ಅವರ ಪಕ್ವತೆಯನ್ನು ಸೂಚಿಸುತ್ತವೆ. ಹಿರಿಯ ಕಲಾವಿದ ಹಾಗೂ ವಿಭೂತಿ ಮಾಸಪತ್ರಿಕೆ ಸಂಪಾದಕ ಅಂದಾನಪ್ಪ ವಿಭೂತಿ ವಿಜಯದಾಸರಾಗಿ ಭಾವಪೂರ್ಣ ಅಭಿನಯ ನೀಡಿದ್ದಾರೆ. ಅಪ್ಪಣ್ಣಾಚಾರ್ಯರಾಗಿ ಮುರಳೀಧರ ಸಂಕನೂರ ಸಹಜಾಭಿನಯವನ್ನು ಪ್ರಸ್ತುತಪಡಿಸಿದರೆ, ರಾಕ್ಷಸನಾಗಿ ಅನಘಾ ಕುಲಕರ್ಣಿ, ಸ್ವಾಮಿರಾಯರಾಗಿ ಅಧ್ಯಾಪಕರಾದ ವಿಶ್ವನಾಥ ಬೇಂದ್ರೆ ಪ್ರೇಕ್ಷಕರ ಮೊಗದಲ್ಲಿ ನಗು ಮೂಡಿಸುತ್ತಾರೆ. ಮೇಜರ್ ಮನ್ರೂನಾಗಿ ಉಜ್ವಲ ಕಬಾಡಿ ಗಮನ ಸೆಳೆಯುತ್ತಾರೆ.
ಇನ್ನುಳಿದಂತೆ ಅಪ್ಪಾವರಾಗಿ ಡಾ. ಗಿರೀಶ ಬಡಿಗೇರ, ನವಾಬರಾಗಿ ಅವನಿ ಕುಲಕರ್ಣಿ, ಆನಂದ ದಾಸರಾಗಿ ಶುಭಾಂಗಿ ದ್ಯಾಮೇನಹಳ್ಳಿ, ವಾಧೀಂದ್ರರಾಗಿ ಮಹೇಶ ಸಂದಿಗೂಡು, ಸಹಾಯಕರಾಗಿ ಶ್ರದ್ಧಾ ಕಬಾಡಿ, ವೆಂಕಣ್ಣನಾಗಿ ಸುರಭಿ ಮಹಾಶಬ್ದಿ ಮಂಚಲಮ್ಮನಾಗಿ ರಕ್ಷಿತಾ ಕುಲಕರ್ಣಿ, ಭಾಗಣ್ಣನಾಗಿ ಸಂಜನಾ ದೀಪಾಲಿ, ಜಗನ್ನಾಥದಾಸರಾಗಿ ಯಶೋಧಾ ಗುಮಾಸ್ತ, ಅರ್ಚಕರಾಗಿ ಸನತ್ ದೀಪಾಲಿ, ವಿಕಲಚೇತನ ನೃತ್ಯಗಾರ್ತಿಯಾಗಿ ಅನ್ವಿತಾ, ಕೃಷ್ಣನಾಗಿ ರಂಜಿತಾ ಕುಲಕರ್ಣಿ ನವಾಬನ ಸೇವಕನಾಗಿ ಅಪೇಕ್ಷಾ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.
ಈ ಸಂಗೀತ ರೂಪಕಕ್ಕೆ ಸುಮಧ್ವ ದ್ಯಾಮೇನಹಳ್ಳಿ ಬೆಳಕು ಸಂಯೋಜಿಸಿದ್ದಾರೆ. ತೇರದಾಳ ತಬಲಾ ಸಾಥ್ ನೀಡಿದರೆ, ರಂಗಪ್ಪ ಹುಯಿಲಗೋಳ ಹಾಗೂ ಶ್ರೀನಿವಾಸ ಹಡಪದ ಪ್ರಸಾದನ ಕಾರ್ಯದಲ್ಲಿ ಅಚ್ಚುಕಟ್ಟುತನವಿದೆ. ಕಲಾವಿದ ಮಹೇಶ ಸಂದಿಗೋಡು ರಂಗಪರಿಕರಗಳನ್ನು ನಿರ್ಮಿಸಿದ್ದಾರೆ.
ಫಣೀಂದ್ರಾಚಾರ್ಯರ ನಾಟಕಗಳ ವಿಶೇಷತೆಯೆಂದರೆ ನಾಟಕದ ವಿಷಯ ವಸ್ತು ಗಂಭೀರ ಧಾರ್ಮಿಕ ಸಂಗತಿಗಳನ್ನು ಹೊಂದಿದ್ದರೂ ಅದಕ್ಕೆ ಸದಭಿರುಚಿಯ ಹಾಸ್ಯದ ಲೇಪನ, ದಾಸರಪದಗಳ ಔಚಿತ್ಯಪೂರ್ಣ ಬಳಕೆ, ಚಿಕ್ಕವೇದಿಕೆಯಲ್ಲಿ ಚೊಕ್ಕ ಮತ್ತು ಕಲಾಪೂರ್ಣ ರಂಗಸಜ್ಜಿಕೆ ಬೆಳಕು ವಿನ್ಯಾಸವನ್ನು ಯಥಾಯೋಗ್ಯ ರೀತಿಯಲ್ಲಿ ನಿರ್ಮಿಸಿ ಬಾಲಕಲಾವಿದರನ್ನು ಪೋಷಕ ಪಾತ್ರಗಳಿಗೆ ಬಳಿಸಿ ಅತ್ಯಂತ ಸಮರ್ಥ ರೀತಿಯಲ್ಲಿ ಭಕ್ತಿಭಾವಗಳನ್ನು ಪ್ರೇಕ್ಷಕರನ್ನು ಉದ್ದೀಪಸುವಂಥ ಸಂಗೀತರೂಪಕ ಪ್ರದರ್ಶಿಸಿದ್ದಾರೆ. ಹೀಗಾಗಿ ಫಣೀಂದ್ರಾಚಾರ್ಯರು ಹಾಗೂ ಎಲ್ಲ ಕಲಾವಿದರಿಗೆ ನಾಟಕಾಸಕ್ತರ ವಿಶೇಷ ಅಭಿನಂದನೆ ಸಲ್ಲಲೇಬೇಕು.
– ಡಾ. ದತ್ತಪ್ರಸನ್ನ ಪಾಟೀಲ.
ಕಲಾವಿಮರ್ಶಕರು, ಗದಗ.



