ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : `ವೃಕ್ಷೋ ರಕ್ಷತಿ ರಕ್ಷಿತಃ’ ಎಂಬಂತೆ ಪ್ರಸ್ತುತ ದಿನಮಾನದಲ್ಲಿ ಎಲ್ಲಕ್ಕಿಂತ ಅತ್ಯವಶ್ಯವಾದ ಪ್ರಕೃತಿ ಮಾತೆಯನ್ನು ಪೂಜ್ಯನೀಯ ಭಾವನೆಯಿಂದ ಕಂಡು, ಉಳಿಸಿ-ಬೆಳೆಸಿ, ಪೋಷಿಸುವ ಸತ್ ಸಂಕಲ್ಪವನ್ನು ಎಲ್ಲರೂ ಮಾಡಬೇಕಾಗಿದೆ ಎಂದು ಹುಬ್ಬಳ್ಳಿಯ ವರದಶ್ರೀ ಫೌಂಡೇಶನ್ ಸಂಸ್ಥಾಪಕ ಮಲ್ಲಿಕಾರ್ಜುನ ರಡ್ಡೇರ ಹೇಳಿದರು.
ಅವರು ಬುಧವಾರ ಹುಬ್ಬಳ್ಳಿಯ ವರದಶ್ರೀ ಪೌಂಡೇಶನ್ ವತಿಯಿಂದ ಪಟ್ಟಣದ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಪುರಸಭೆ ಹಾಗೂ ಸಂಘಟನೆಗಳ ಸಹಯೋಗದಲ್ಲಿ ನಡೆದ ಪಂಚವಟಿ (ಆಕ್ಸಿಜನ್ ಟಾವರ್) ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಿತ್ಯ ಬದುಕಿನ ಪ್ರಾರಂಭ ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್‌ನಿಂದಲೇ ಆಗುತ್ತಿದೆ. ಇದಕ್ಕೆ ಕಾರಣವಾಗುವ ಪ್ರತಿಯೊಬ್ಬರೂ ಈಗಲೇ ಎಚ್ಚತ್ತುಕೊಳ್ಳದಿದ್ದರೆ ಭವಿಷ್ಯದಲ್ಲಿ ದೊಡ್ಡ ಗಂಡಾಂತರವನ್ನೇ ಎದುರಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಪಾಲಕರು, ಬಾಲಕರು, ಶಿಕ್ಷಕರು, ಕೃಷಿಕರು, ಸೈನಿಕರು, ನಾಯಕರು ಎಲ್ಲರೂ ಬದಲಾದರೆ ನೆಮ್ಮದಿಯ ಬದುಕು ಸಾಧ್ಯ. ದೇವರ ಸ್ವರೂಪದಲ್ಲಿಯೇ ಪೂಜಿಸಲ್ಪಡುವ ಪಂಚವಟಿ ಗಿಡಗಳು ಹೆಚ್ಚು ಆಮ್ಲಜನಕ ಉತ್ಪತ್ತಿ ಮಾಡಿ ವಾತಾವರಣ ಶುದ್ಧಗೊಳಿಸುವ ದೈವೀಶಕ್ತಿ ಗುಣಗಳನ್ನು ಹೊಂದಿವೆ. ಪಟ್ಟಣದ ಹಲವೆಡೆ ಪಂಚವಟಿ ವೃಕ್ಷ ನೆಡಲಾಗುತ್ತಿದ್ದು, ಬರುವ ಮಳೆಗಾಲದಲ್ಲಿ ಇನ್ನೂ ಅನೇಕ ಕಡೆ ಈ ಕಾರ್ಯ ನಡೆಸಲಾಗುವುದು ಎಂದರು.
ಈಶ್ವರೀಯ ವಿಶ್ವವಿದ್ಯಾಲಯದ ಹಿರಿಯರಾದ ಬಿ.ಕೆ. ಪ್ರಕಾಶ ಮಾತನಾಡಿ, ನಿತ್ಯ ಬದುಕಿನಲ್ಲಿ ಆಧ್ಯಾತ್ಮ, ಧ್ಯಾನ, ಪ್ರಾರ್ಥನೆ ಅಳವಡಿಸಿಕೊಳ್ಳಬೇಕು. ಮಕ್ಕಳಿಗೆ ಆಸ್ತಿ-ನೌಕರಿ ಕೊಡಿಸುವ ಜತೆಗೆ ಸಾಮಾಜಿಕ ಕಳಕಳಿಯ ಮತ್ತು ಬದುಕಿನ ಮೌಲ್ಯಗಳ ಶಿಕ್ಷಣ ನೀಡಿ. ಮಾನವ ಕಲ್ಯಾಣದ ಎಲ್ಲ ಅಂಶಗಗಳು ಪರಿಸರದಲ್ಲಿವೆ. ಎಲ್ಲರೂ ಸೇರಿ ಪೃಕೃತಿಯ ಬಗ್ಗೆ ಪೂಜ್ಯನೀಯ ಭಾವನೆ ಹೊಂದಬೇಕು ಎಂದರು.
ಪುರಸಭೆ ಮುಖ್ಯಾಧಿಕಾರಿ ಮಹೇಶ ಹಡಪದ ಮಾತನಾಡಿ, ಪರಿಸರ ಮಾಲಿನ್ಯ ನಿವಾರಣೆ, ಆರೋಗ್ಯಕರ ವಾತಾವರಣ ನಿರ್ಮಾಣ ಮಾಡುವ, ಶ್ರೇಷ್ಠ ಶಕ್ತಿಯುಳ್ಳ ಪಂಚವಟಿ ಗಿಡಗಳನ್ನು ವರದಶ್ರೀ ಫೌಂಢೇಶನ್ ಸಹಕಾರದೊಂದಿಗೆ ಪಟ್ಟಣದ ಉದ್ಯಾನವನ, ಸಾರ್ವಜನಿಕ ಸ್ಥಳ, ಶಾಲೆ-ದೇವಸ್ಥಾನಗಳಲ್ಲಿ ನೆಡಲು ಪುರಸಭೆ ಸಹಕಾರ ನೀಡಲಿದೆ. ಪುರಸಭೆ ಮಾಡುವ ಸ್ವಚ್ಚತಾ ಕಾರ್ಯಕ್ಕೆ ನಾಗರಿಕರು ಕೈ ಜೋಡಿಸಬೇಕು ಎಂದರು.
ಈ ವೇಳೆ ಹಿರಿಯರಾದ ಜಯಲಕ್ಷ್ಮಿ ಗಡ್ಡದೇವರಮಠ, ವರದಶ್ರೀ ಫೌಂಡೇಶನ್‌ನ ಕಾರ್ಯದರ್ಶಿ ಕೆ.ಎಸ್. ಶಿರಸಂಗಿ, ಚಂಬಣ್ಣ ಬಾಳಿಕಾಯಿ, ಡಾ. ಶ್ರೀಕಾಂತ ಕಾಟೇವಾಲೆ, ಡಾ. ಗಿರೀಶ ಮರಡ್ಡಿ, ಡಾ. ಪ್ರಸನ್ ಕುಲಕರ್ಣಿ, ಜಯಣ್ಣ ಮೇಗಿಲಮನಿ, ಎ.ಬಿ. ಸವಣೂರ, ಬಸವರಾಜ ಸಂಗಪ್ಪಶೆಟ್ಟರ, ಎನ್.ಎಂ. ವಾಲಿ, ಎಸ್.ಜಿ. ಹೂವಿನ, ಎ.ಎಚ್. ಅಮರಶೆಟ್ಟಿ, ಮಾಂತೇಶ ಗೋಣೆಪ್ಪನವರ, ಎ.ಬಿ. ಪಾಟೀಲ, ರಾಜಯೋಗಿನಿಯರಾದ ಸುಮಂಗಲಾ, ಉಮಕ್ಕ, ಅನಿತಾ ಉಪಸ್ಥಿತರಿದ್ದರು. ರಾಜಯೋಗಿನಿ ಬಿ.ಕೆ. ನಾಗಲಾಂಬಿಕೆ, ಎಸ್.ಎ. ಬಣಗಾರ ನಿರೂಪಿಸಿದರು.
ಪಂಚವಟಿ ವೃಕ್ಷ ಮಹತ್ವ
ಬಿಲ್ವಪತ್ರೆ: ಬಿಲ್ವಪತ್ರೆಯ ಗಿಡಗಳಲ್ಲಿ ಶಿವನು ನೆಲೆಸಿರುವನೆಂಬ ನಂಬಿಕೆ ಇದೆ. ಎಲೆ, ಕಾಂಡ, ಬೇರು, ತೊಗಟೆ ಮತ್ತು ಹಣ್ಣುಗಳ ಆರೋಗ್ಯದ ಅನೇಕ ಕಾರಣಗಳಿಗೆ ಉಪಯೋಗಿಸಲಾಗುತ್ತಿದ್ದು, ಪಂಚವಟಿ ನಿರ್ಮಾಣದಲ್ಲಿ ಮೊದಲ ಆದ್ಯತೆಯಿದೆ.
ಬನ್ನಿಗಿಡ: ಪಾಂಡವರು ವನವಾಸದಲ್ಲಿದ್ದಾಗ ತಮ್ಮ ಶಸ್ತ್ರಾಸ್ತ್ರ, ಆಯುಧಗಳ ರಕ್ಷಣೆಗೆ ಬಳಸಿದ್ದ ಈ ಗಿಡದ ಎಲೆಯನ್ನು ವಿಜಯದಶಯಮಿಯಂದು ಬಾಂಧವ್ಯ ಹಬ್ಬಕ್ಕೆ ಬಳಸಲಾಗುತ್ತದೆ. ಬನ್ನಿ ಆಮ್ಲಜನಿಕ ಕೊಡುವ ಮರಗಳಲ್ಲಿ 2ನೇಯದ್ದಾಗಿದೆ.
ಬೇವು: ಅನೇಕ ರೋಗಗಳನ್ನು ಗುಣಪಡಿಸಲು ರಾಮಬಾಣವಾಗಿ ಬಳಸುತ್ತಾರೆ. ರೋಗ ನಿರೋಧಕ ಶಕ್ತಿ ಹೊಂದಿದ್ದು, ಹೆಚ್ಚಿನ ಆಮ್ಲಜನಕ ಬಿಡುಗಡೆಗೊಳಿಸುತ್ತದೆ.
ಅರಳಿ: ಅರಳಿ ವೃಕ್ಷದ ಬುಡದಲ್ಲಿ ಬ್ರಹ್ಮ, ಮಧ್ಯದಲ್ಲಿ ವಿಷ್ಣು, ಮೇಲ್ತುದಿಯಲ್ಲಿ ಶಿವ ನೆಲೆಸಿರುವ ನಂಬಿಕೆಯಿಂದ ಪೂಜಿಸಲಾಗುತ್ತದೆ. ಹೆಚ್ಚು ಆಮ್ಲಜನಿಕ ನೀಡುವ ವೃಕ್ಷವಾಗಿದೆ.
ಅತ್ತಿ: ಅತ್ತಿ ಆಲದ ಮರದ ಸೋದರ ಬಂಧುವಂತೆ. ಅತ್ತಿ ಹಣ್ಣು ಕಣ್ಣಿನ ಯಾವುದೇ ರೋಗ ಗುಣಪಡಿಸುವ ಶಕ್ತಿ ಹೊಂದಿದ್ದು, ಆಮ್ಲಜನಿಕ ಉತ್ಪತ್ತಿ ಮಾಡುವ ಪಂಚವಟಿಗಳಲ್ಲೊಂದಾಗಿದೆ.