ವಿಜಯಸಾಕ್ಷಿ ಸುದ್ದಿ, ಗದಗ : ಆಧುನಿಕ ಸಮಾಜದಲ್ಲಿ ಪ್ಲಂಬರ್ ವೃತ್ತಿ ಅತ್ಯಂತ ಪ್ರಮುಖ ಹಾಗೂ ಅವಶ್ಯವಿರುವ ವೃತ್ತಿಯಾಗಿದೆ. ಮನೆ ಹಾಗೂ ವ್ಯಾಪಾರ, ಕೈಗಾರಿಕಾ ಕ್ಷೇತ್ರ, ಆಸ್ಪತ್ರೆಗಳಲ್ಲಿ ಸ್ವಚ್ಛ ನೀರಿನ ಸರಬರಾಜಿಗೆ ಪ್ಲಂಬರ್ ವೃತ್ತಿ ಕಾರಣವಾಗಿದೆಯೆಂದು ನಗರದ ಖ್ಯಾತ ವೈದ್ಯರಾದ ಡಾ. ಸಿ. ಸೋಲೋಮನ್ ಅಭಿಪ್ರಾಯಪಟ್ಟರು.
ಗದಗ-ಬೆಟಗೇರಿ ಪ್ಲಂಬರ್ ಸಂಘದ ವತಿಯಿಂದ ಇಲ್ಲಿನ ಉಷಾದೇವಿ ಜಿ.ಕುಷ್ಟಗಿ ರೋಟರಿ ಕಮ್ಯುನಿಟಿ ಕೇರ್ ಸೆಂಟರ್‌ನಲ್ಲಿ ಏರ್ಪಡಿಸಿದ್ದ ವಿಶ್ವ ಕೊಳಾಯಿಗಾರ (ಪ್ಲಂಬರ್) ದಿನಾಚಾರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅತಿಥಿಗಳಾಗಿ ಆಗಮಿಸಿದ್ದ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಶನ್‌ನ ಅಧ್ಯಕ್ಷ ಇಂ.ಎಮ್.ಪಿ ಪಾಟೀಲ್ ಮಾತನಾಡಿ, ಪ್ಲಂಬರ್ ವೃತ್ತಿಯು ನಿರಂತರವಾಗಿ ಕೆಲಸ ಲಭಿಸುವ ವೃತ್ತಿಯಾಗಿದ್ದು, ಆಕರ್ಷಕ ಸಂಭಾವನೆ ಲಭಿಸುವುದರಿಂದ ಯುವಕರು ಈ ವೃತ್ತಿಯ ಕಡೆಗೆ ಆಕರ್ಷಿತರಾಗುತ್ತಿದ್ದಾರೆ. ಎಲ್ಲ ಇಂಜಿನಿಯರುಗಳು ಇವರಿಗೆ ಸಹಾಯ ನೀಡುತ್ತಿರುವುದು ಹೆಮ್ಮೆಯ ವಿಷಯವಾಗಿದೆಯೆಂದರು.
ರೋಟರಿ ಸಂಸ್ಥೆಯ ವೆಲ್‌ಫೇರ್ ಸೊಸೈಟಿ ಅಧ್ಯಕ್ಷ ರೊ. ಶ್ರೀಧರ ಸುಲ್ತಾನಪೂರ ಮಾತನಾಡುತ್ತಾ, ಎಲ್ಲ ಕಾರ್ಮಿಕರು ಪ್ಲಂಬರ್‌ರಂತೆ ಸಮಾಜಕ್ಕೆ ತಮ್ಮ ಕೊಡುಗೆ ನೀಡಬೇಕೆಂದರು. ಪ್ಲಂಬರ್ ಸಂಘದ ಸಂಸ್ಥಾಪಕ ಅಧ್ಯಕ್ಷ ಝಡ್.ಡಿ. ಬೇಲೇರಿ ಸಂಘ ನಡೆದು ಬಂದ ಹಾದಿ ಹಾಗೂ ಕೈಗೊಂಡ ಸಮಾಜಿಕ ಕಾರ್ಯಗಳ ಬಗ್ಗೆ ತಿಳಿಸಿದರು. ಸಂಘದ ಖಜಾಂಚಿ ಬಾಲಕೃಷ್ಣ ಕಾಮತ ಪ್ಲಂಬರ್ ದಿನದ ಮಹತ್ವ ಹಾಗೂ ಪ್ರತಿಯೊಬ್ಬ ಪ್ಲಂಬರ್ ಕೈಗೊಳ್ಳಬೇಕಾದ ಕರ್ತವ್ಯಗಳ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ಕಾರ್ಮಿಕ ಮಕ್ಕಳಿಗೆ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಥರ ಕಡಿಯುವರ ಸಂಘ, ಗದಗ ಜಿಲ್ಲಾ ಕಟ್ಟಡ ಕಾರ್ಮಿಕರ ಗೌಂಡಿ-ಮೇಸ್ತಿçಗಳ ಸಂಘ, ಸೆಂಟ್ರಿಂಗ್ ಮತ್ತು ಬಾರ್ ಬೆಂಡಿಂಗ್ ಸಂಘ, ಗದಗ-ಬೆಟಗೇರಿ ಕಾರ್ಪೆಂಟರ್ ಸಂಘ, ಗದಗ-ಬೆಟಗೇರಿ ಟೈಲ್ಸ್ ಜೋಡಿಸುವ ಕಾರ್ಮಿಕರ ಸಂಘ, ರವಿವರ್ಮ ಪೇಂಟರ್ ಸಂಘ, ಗದಗ-ಬೆಟಗೇರಿ ಅಮರಶಿಲ್ಪಿ ಜಕಣಾಚಾರಿ ಕಟ್ಟಡ ನಿರ್ಮಾಣ ಕಾರ್ಮಿಕರ ಸಂಘ, ಗದಗ-ಬೆಟಗೇರಿ ಕುಮಾರವ್ಯಾಸ ಲಿಫ್ಟ್ ಕಾಂಕ್ರೀಟ್ ಹಾಕುವವರ ಸಂಘಗಳ ಅಧ್ಯಕ್ಷರುಗಳಿಗೆ ಸಂಸ್ಥೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಮಿಕ ಕಲ್ಯಾಣ ಸಂಸ್ಥೆಯ ಅಧ್ಯಕ್ಷ ಮಹ್ಮದ ಇರ್ಫಾನ ಡಂಬಳ, ಗಣ್ಯ ವ್ಯಾಪಾರಸ್ಥರಾದ ವಿನೋದ ಪಟೇಲ, ರೋಟರಿ ಸಂಸ್ಥೆಯ ಅಧ್ಯಕ್ಷ ರೊ. ಚಂದ್ರಮೌಳಿ ಜಾಲಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಶನ್ ಸದಸ್ಯರಾದ ಇಂ.ಜಯರಾಜ ಮುಳಗುಂದ, ಇಂ. ದಾಸಪ್ಪರನವರ, ರೋಟರಿ ಸಂಸ್ಥೆಯ ಸದಸ್ಯರಾದ ರೊ. ಎಸ್.ಎಸ್. ಹೊಸಳ್ಳಿಮಠ, ರೊ. ಅಕ್ಷಯ ಶೆಟ್ಟಿ, ರೊ. ವಿಶ್ವನಾಥ ಯಳಮಲಿ ಮುಂತಾದವರು ಉಪಸ್ಥಿತರಿದ್ದರು. ನಾಸಿರ್ ಚಿಕೇನಕೊಪ್ಪ ಕಾರ್ಯಕ್ರಮ ನಿರೂಪಿಸಿದರು. ನಿಂಗಪ್ಪ ಕಟ್ಟಿಮನಿ ವಂದಿಸಿರು.


