ಕೆ.ಎಚ್. ಪಾಟೀಲರು ರೈತರ ಅಭ್ಯುದಯಕ್ಕೆ ಶ್ರಮಿಸಿದ ರಾಜಕಾರಣಿ

0
hulakoti
Spread the love

ವಿಜಯಸಾಕ್ಷಿ ಸುದ್ದಿ, ಗದಗ : ರಾಜಕಾರಣಿಗಳಿಗೆ ಸುಳ್ಳೇ ಬಂಡವಾಳ. ಆದರೆ ಕೆ.ಎಚ್. ಪಾಟೀಲ ಅದಕ್ಕೆ ಅಪವಾದವೆಂಬಂತ್ತಿದ್ದರು. ನೇರ ನುಡಿಯಿಂದ ವಿಶಿಷ್ಟವಾಗಿ ಗುರುತಿಸಿಕೊಂಡಿದ್ದ ಅವರು ನಡೆದು ಬಂದ ದಾರಿಯನ್ನು ನಾಡಿಗೇ ಪರಿಚಯಿಸಬೇಕು. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಅವರ ಜೀವನ, ಸಾಧನೆ, ರಾಜಕಾರಣ ಕುರಿತಾದ ಕಿರು ಹೊತ್ತಿಗೆಯನ್ನು ತಲುಪಿಸುವ ಕೆಲಸ ಮಾಡಬೇಕು ಎಂದು ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಅಭಿಪ್ರಾಯಪಟ್ಟರು.

Advertisement

ಶನಿವಾರ ಮಧ್ಯಾಹ್ನ 3 ಗಂಟೆಗೆ ತಾಲೂಕಿನ ಹುಲಕೋಟಿ ಗ್ರಾಮದ ಕೆ.ಎಚ್. ಪಾಟೀಲ ವಿದ್ಯಾಮಂದಿರದ ಆವರಣದಲ್ಲಿ ನಡೆದ `ಕೆ.ಎಚ್. ಪಾಟೀಲ ಜನ್ಮಶತಮಾನೋತ್ಸವ’ ಪ್ರಾರಂಭೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

khp

ರೈತರ ಅಭ್ಯುದಯಕ್ಕೆ ರಾಜಕಾರಣಿಯಾಗಿ ಮಾಡಬಹುದಾದ ಎಲ್ಲ ಕೆಲಸಗಳನ್ನು ಕೆ.ಎಚ್. ಪಾಟೀಲ ಮಾಡಿದ್ದಾರೆ ಎಂದು ಸಚಿವ ಕೆ.ಎನ್. ರಾಜಣ್ಣ ಹೇಳಿದರು.

ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ನೇರ ನುಡಿಯ ರಾಜಕಾರಣಿ, ಸಹಕಾರಿ ಧುರೀಣ ದಿ. ಕೆ.ಎಚ್. ಪಾಟೀಲ ಅವರ ಕಾರ್ಯವನ್ನು ಡಿ.ಆರ್. ಪಾಟೀಲ, ಎಚ್.ಕೆ. ಪಾಟೀಲ ಸಮರ್ಥವಾಗಿ ಮುನ್ನಡೆಸಿದ್ದಾರೆ.

ಅವರ ಜೀವನ ಸಾಧನೆ, ರಾಜಕಾರಣವನ್ನು ವರ್ಷಪೂರ್ತಿ ಇಂದಿನ ಯುವಕರಿಗೆ ತಿಳಿಸುವ ಕಾರ್ಯ ಜನ್ಮಶತಮಾನೋತ್ಸವದ ಮೂಲಕ ನಡೆಯಲಿ ಎಂದು ಹಾರೈಸಿ, ಕೆ.ಎಚ್. ಪಾಟೀಲ ಕಿಡ್ನಿ ಕೇರ್ ಸೆಂಟರ್, ಗ್ರಾಮೀಣ ಭಾಗದಲ್ಲಿ ಆರಂಭವಾದ ದೇಶದ ಮೊದಲ ಕಿಡ್ನಿ ಕಸಿ ಕೇಂದ್ರವಾಗಿದೆ ಎಂದರು.

ತುಮಕೂರು ಸಂಸದ ಜಿ.ಎಸ್. ಬಸವರಾಜ ಮಾತನಾಡಿ, ಕೆ.ಎಚ್. ಪಾಟೀಲ ನನ್ನ ತಂದೆಯ ಸ್ಥಾನದಲ್ಲಿ ನಿಂತವರು. 22 ವರ್ಷ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷನಾಗಿ ಪಕ್ಷ ಸಂಘಟನೆ ಮಾಡಲು ಮಾರ್ಗದರ್ಶನ ಮಾಡಿದರು. ಅವರ ವ್ಯಕ್ತಿತ್ವವನ್ನು ಬಹಳ ಹತ್ತಿರದಿಂದ ಕಂಡಿದ್ದು, ಅವರ ಬದುಕು ಮುಂದಿನ ಪೀಳಿಗೆಗೆ ಆದರ್ಶವಾಗಿದೆ ಎಂದರು.

programm

ಕಾನೂನು ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಮಾತನಾಡಿ, ಕೆ.ಎಚ್. ಪಾಟೀಲರ ಚಿಂತನೆಯನ್ನು ಪ್ರತಿ ಭಾನುವಾರ ಅನುಷ್ಠಾನಗೊಳಿಸುವಂತೆ ವರ್ಷಪೂರ್ತಿ ಮಾಡಲಾಗುವುದು. 60 ಕೆಲಸಗಳ ಪಟ್ಟಿ ಮಾಡಿ, ರಚನಾತ್ಮಕ ಕಾರ್ಯಕರ್ತರ ಪಡೆ ಅವರ ಕನಸು ನನಸು ಮಾಡಲು ಶ್ರಮಿಸಲಿದೆ. ಕೆ.ಎಚ್. ಪಾಟೀಲರ ಆಶೀರ್ವಾದದಿಂದ ಸಂಘರ್ಷವಾದಕ್ಕೆ ಹೋಗುವ ಅನಿವಾರ್ಯತೆ ಬಂದಿಲ್ಲ. ಅಗತ್ಯ ಬಿದ್ದರೆ ಜನ ಬೆಂಬಲದೊಂದಿಗೆ ಸಂಘರ್ಷವಾದಕ್ಕೆ ಇಳಿಯುವುದಾಗಿ ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಮಾಜಿ ಶಾಸಕ ಡಿ.ಆರ್. ಪಾಟೀಲ, ನಾಡು ಕಂಡ ಧೀಮಂತ ರಾಜಕಾರಣಿ ದಿ. ಕೆ.ಎಚ್. ಪಾಟೀಲ ಅವರ ಜನ್ಮಶತಮಾನೋತ್ಸವವನ್ನು ವರ್ಷಪೂರ್ತಿ ಆಚರಣೆ ಮಾಡಲಾಗುವುದು. ಆ ಮೂಲಕ ಕೆ.ಎಚ್. ಪಾಟೀಲ ಆದರ್ಶಗಳನ್ನು ಮುಂದಿನ ಪೀಳಿಗೆಗೆ ತಿಳಿಸುವ ಪ್ರಯತ್ನ ಮಾಡಲಾಗುವುದು ಎಂದರು.

ಶಾಸಕ ಶ್ರೀನಿವಾಸ ಮಾನೆ, ಎನ್.ಎಚ್. ಕೋನರೆಡ್ಡಿ, ಮಾಜಿ ಶಾಸಕರಾದ ಬಿ.ಆರ್. ಯಾವಗಲ್, ಜಿ.ಎಸ್. ಗಡ್ಡದೇವರಮಠ, ರಾಮಣ್ಣ ಲಮಾಣಿ, ಐ.ಜಿ. ಸನದಿ, ಎ.ಎಂ. ಹಿಂಡಸಗೇರಿ, ಹಾವೇರಿ ಲೋಕಸಭೆ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ, ಬಿ.ಬಿ. ಅಸೂಟಿ, ಮಿಥುನ್ ಪಾಟೀಲ, ಅಕ್ಬರ್‌ಸಾಬ ಬಬರ್ಚಿ, ಎಲ್.ಡಿ. ಚಂದಾವರಿ ಇತರರು ಉಪಸ್ಥಿತರಿದ್ದರು.

ಕೆ.ಎಚ್. ಪಾಟೀಲರು ನೇರ-ನಿಷ್ಠುರ ರಾಜಕಾರಣಿಯಾಗಿದ್ದರು. ಆದರೆ ಎಚ್.ಕೆ. ಪಾಟೀಲರು ಮಾತ್ರ ಸೌಮ್ಯ ಸ್ವಭಾವದವರು. ಸೌಮ್ಯವಾಗಿಯೇ ಇದ್ದು ಕೆ.ಎಚ್. ಪಾಟೀಲರಿಗಿಂತ ಹೆಚ್ಚಿನ ಅಭಿವೃದ್ಧಿ ಮಾಡಿದ್ದಾರೆ. ಎಚ್.ಕೆ. ಪಾಟೀಲರು ಏನಾದರೂ ತಿಳಿದುಕೊಳ್ಳಲಿ, ಕೆ.ಎಚ್. ಪಾಟೀಲ ಅವರ ಗತ್ತು ಎಚ್.ಕೆ. ಪಾಟೀಲರಿಗೆ ಬರಲಿಲ್ಲ. ಆದರೆ ಮೃದುವಾಗಿಯೇ ಸಾಕಷ್ಟು ಕೆಲಸ ಮಾಡಿದ್ದಾರೆ.
– ಕೆ.ಎನ್. ರಾಜಣ್ಣ.
ಸಹಕಾರಿ ಸಚಿವರು.

ಗಿನ್ನಿಸ್ ಬುಕ್ ಆಫ್ ರೆಕಾರ್ಡ್ನಲ್ಲಿ ಸ್ಥಾನ ಪಡೆದ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಕೆ.ಎಚ್. ಪಾಟೀಲ ಕಿಡ್ನಿ ಕೇರ್ ಸೆಂಟರ್‌ಗೆ ಸಂಸದ ಜಿ.ಎಸ್. ಬಸವರಾಜ ಚಾಲನೆ ನೀಡಿದರು. `ಜನಮೆಚ್ಚಿದ ನಾಯಕ’ ಕಿರುಹೊತ್ತಿಗೆಯನ್ನು ಬಿಡುಗಡೆಗೊಳಿಸಲಾಯಿತು.


Spread the love

LEAVE A REPLY

Please enter your comment!
Please enter your name here