ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ : ಹುಬ್ಬಳ್ಳಿ ಹಾಗೂ ಕುಂದಗೋಳ ತಾಲೂಕಿನ ಗ್ರಾಮೀಣ ಭಾಗದ ಅಂಚಟಗೇರಿ, ನೂಲ್ವಿ, ಕುಂದಗೋಳ, ಬೆನಕನಹಳ್ಳಿ, ಚಿಕ್ಕನೇರ್ತಿ, ರೊಟ್ಟಿಗವಾಡ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಶಾಂತಿಯುತ ಮತದಾನ ಪ್ರಕ್ರಿಯೆ ನಡೆಯಿತು.
ಬೆಳಿಗ್ಗೆಯಿಂದಲೇ ಮತದಾರರು ಮತಗಟ್ಟೆಗಳಲ್ಲಿ ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸುವ ದೃಶ್ಯಗಳು ಸಾಮಾನ್ಯವಾಗಿದ್ದವು. ಅಲ್ಲದೇ ಹಿರಿಯ ನಾಗರಿಕರು ತಮ್ಮ ಹಕ್ಕು ಚಲಾಯಿಸಲು ಖುದ್ದಾಗಿ ಮತಗಟ್ಟೆಗೆ ಬಂದು ಮತದಾನ ಮಾಡಿದರು. ವಿಶೇಷಚೇತನರು ಸಹ ತಪ್ಪದೇ ಮತದಾನ ಹಕ್ಕನ್ನು ಚಲಾಯಿಸಿದರು.
ರೊಟ್ಟಿಗವಾಡ ಗ್ರಾಮದ ವಿಶೇಷಚೇತನರಾದ ಅಶೋಕ ಕಬನೂರು ಮಾತನಾಡಿ, ನನ್ನ ಮತ ನನ್ನ ಹಕ್ಕಾಗಿದೆ. ಯಾವುದೇ ಆಮಿಷಗಳಿಗೆ ಒಳಗಾಗದೇ ನನ್ನ ಮತವನ್ನು ಚಲಾಯಿಸಿದ್ದೇನೆ. ವಿಶೇಷಚೇತನರಿಗೆ ಮನೆಯಿಂದಲೇ ಮತದಾನ ಮಾಡುವ ಅವಕಾಶ ಕಲ್ಪಿಸಲಾಗಿತ್ತು. ಆದರೂ ಸಹ ಮತಗಟ್ಟೆಗೆ ಎಲ್ಲರೊಂದಿಗೆ ಬಂದು ಮತ ಚಲಾಯಿಸಿದ್ದು ಖುಷಿ ನೀಡಿದೆ ಎಂದರು.
ವಿವಿಧ ಗ್ರಾಮಗಳಲ್ಲಿನ ಯುವ ಮತದಾರರು ಮೊದಲ ಬಾರಿಗೆ ತಮ್ಮ ಹಕ್ಕನ್ನು ಚಲಾಯಿಸಿ ಸಂತಸಪಟ್ಟರು.
ಯಾವುದೇ ಅಂಜಿಕೆ, ಭೀತಿಯಿಲ್ಲದೇ ಮತದಾನ ಮಾಡಿದರು. ನೂಲ್ವಿ ಗ್ರಾಮದ ವೇದಾ ಗಾಟಗೆ ಮಾತನಾಡಿ, ನಾನು ಇದೇ ಮೊದಲ ಬಾರಿಗೆ ಮತ ಚಲಾಯಿಸಿದ್ದೇನೆ. ಬಹಳ ಖುಷಿಯಾಗಿದೆ. ದೇಶದ ನಾಯಕರ ಆಯ್ಕೆಯಲ್ಲಿ ನಾನು ಕೂಡ ಭಾಗಿಯಾಗಿದ್ದೇನೆ ಎಂಬ ಸಂತಸ ತಂದಿದೆ ಎಂದು ತಮ್ಮ ಅನುಭವ ಹಂಚಿಕೊಂಡರು.
ಬೆನಕನಹಳ್ಳಿಯ ಸೌಭಾಗ್ಯ ಹಳೇಮನಿ ಮಾತನಾಡಿ, ಮೊದಲ ಬಾರಿ ಮತದಾನ ಮಾಡಿದ್ದು ಸಂತೋಷವನ್ನುಂಟು ಮಾಡಿದೆ. ಈಗಾಗಲೇ ಮತದಾನ ಮಾಡುವ ಕುರಿತು ಅರಿತುಕೊಂಡಿದ್ದರಿಂದ ಯಾವುದೇ ರೀತಿಯ ಭಯವಿರಲಿಲ್ಲ. ದೇಶದ ಅಭಿವೃದ್ಧಿಗೆ ನಾನು ನನ್ನ ಮತ ಚಲಾಯಿಸುವ ಮೂಲಕ ಕೊಡುಗೆ ನೀಡಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಮಹಿಳೆಯರ ಮತದಾನ ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕುಂದಗೋಳದ ಸಖಿ ಮತಗಟ್ಟೆ ಸಂಖ್ಯೆ 39, ಮತದಾರರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಮತಗಟ್ಟೆ ಹೊರಗಡೆ ಗುಲಾಬಿ ಬಣ್ಣದ ಪೆಂಡಾಲ್ ಹಾಕಲಾಗಿತ್ತು. ಅಲ್ಲದೇ ಮತಗಟ್ಟೆ ಕೇಂದ್ರ ಕೊಠಡಿಯನ್ನು ಗುಲಾಬಿ ಬಣ್ಣದಿಂದ ಅಲಂಕರಿಸಲಾಗಿತ್ತು.
ಮಹಿಳಾ ಸಿಬ್ಬಂದಿ ಕಾರ್ಯನಿರ್ವಹಿಸಿದ್ದು ಪ್ರಮುಖ ಆಕರ್ಷಣೆಯಾಗಿತ್ತು.
ಹೆಚ್ಚಾಗಿ ಬಿಸಿಲು ಇರುವುದರಿಂದ ಎಲ್ಲಾ ಮತಗಟ್ಟೆಗಳಲ್ಲಿ ಮತದಾರರಿಗೆ ಅಗತ್ಯ ಔಷಧ-ಉಪಚಾರದ ವ್ಯವಸ್ಥೆಯನ್ನು ಆರೋಗ್ಯ ಇಲಾಖೆಯಿಂದ ಕಲ್ಪಿಸಲಾಗಿತ್ತು. ಐಸ್‌ಕ್ಯೂಬ್, ಸ್ಯಾನಿಟೈಜರ್, ಓಆರ್‌ಎಸ್ ಹಾಗೂ ಇತರೆ ಔಷಧಿಗಳನ್ನು ಆರೋಗ್ಯ ಇಲಾಖೆ ಸಿಬ್ಬಂದಿಗಳು ಮತದಾರರಿಗೆ ನೀಡುತ್ತಿದ್ದರು.
ನೂಲ್ವಿ ಗ್ರಾಮದ ಕೊಪ್ಪದ ಕುಟುಂಬದ 96 ಜನ ಮತದಾರರು ತಮ್ಮ ಮತದಾನ ಹಕ್ಕನ್ನು ಚಲಾಯಿಸಿದರು. ಪ್ರತಿ ವರ್ಷದಂತೆ ಈ ಸಾರಿಯೂ ಕೂಡ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಮತದಾನ ಮಾಡಿ ಸಂತಸಪಟ್ಟರು. ಪೂಜಾ ಕೊಪ್ಪದ, ಸರಸ್ವತಿ ಕೊಪ್ಪದ ಹಾಗೂ ಮಂಗಳಾ ಕೊಪ್ಪದ ಅವರು ಮೊದಲ ಬಾರಿಗೆ ಮತ ಚಲಾವಣೆ ಮಾಡಿದರು ಎಂದು ಕಂಠೆಪ್ಪ ಹಾಗೂ ಬಸವರಾಜ ಕೊಪ್ಪದ ಮಾಹಿತಿ ನೀಡಿದರು.