ವೃತ್ತಿನಿರತ ಸಿವಿಲ್ ಇಂಜಿನಿಯರ್‌ಗಳ ನಡುವೆ ಸೌಹಾರ್ದತೆ ಹೊಂದಲು, ಕಾರ್ಮಿಕರು ಹಾಗೂ ಕಟ್ಟಡ ಕಟ್ಟಿಸುವ ಮಾಲೀಕರೊಡನೆ ಪರಸ್ಪರ ಒಳ್ಳೆಯ ಭಾವನೆ ಕಲ್ಪಿಸಿಕೊಡುವುದರ ಉದ್ದೇಶದಿಂದ 1995ರಲ್ಲಿ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಶನ್ ಗದಗದಲ್ಲಿ ಜನ್ಮ ತಾಳಿತು. 1995ರ ಜೂನ್ ತಿಂಗಳಲ್ಲಿ ಸ್ಪಾರ್ ಸ್ಟೀಲ್ ಫೌಂಡೇಶನ್ ಆಫ್ ಇಂಡಿಯಾ ಚೇರ್‌ಮನ್ ಡಾ. ವಿಶ್ವನಾಥ ಅವರಿಂದ ಇದರ ಉದ್ಘಾಟನೆ ನಡೆಯಿತು.
ವೃತ್ತಿನಿರತ ಅಭಿಯಂತರರಿಗೆ ತರಬೇತಿ, ಹೊಸ ಅವಿಷ್ಕಾರಗಳ ತಾಂತ್ರಿಕ ಜ್ಞಾನಗಳ ಪರಿಚಯ ಮಾಡುವ ತರಬೇತಿ ಕಾರ್ಯಾಗಾರಗಳನ್ನು ಮಾಡುತ್ತಾ ಅಸೋಸಿಯೇಶನ್ ಅತ್ಯಂತ ಪ್ರಬಲವಾಗಿ ಬೆಳೆದುಬಂದಿತು. ನಗರಸಭೆ ಅಥವಾ ಸರ್ಕಾರದ ಕಟ್ಟಡ ನಿಯಮಾವಳಿಗಳ ಬಗ್ಗೆ ಕಟ್ಟಡ ಮಾಲೀಕರಿಗೆ ತಿಳಿಸುವುದು, ಅವುಗಳನ್ನು ಸ್ಥಳದಲ್ಲಿ ಪರಿಶೀಲಿಸುವ ಕಾರ್ಯ ಹಾಗೂ ಕಟ್ಟಡದ ಕಾರ್ಮಿಕರಿಗೆ ಕೌಶಲ್ಯ ತರಬೇತಿ ಅಭಿವೃದ್ಧಿಪಡಿಸುವ ಕಾರ್ಯಾಗಾರಗಳನ್ನು ಆಯೋಜಿಸಲಾಯಿತು. ನಗರಸಭೆಯ ಸರ್ಕಾರಿ ಕಾಮಗಾರಿ ಹಾಗೂ ಎಪಿಎಂಸಿ ಕಾಮಗಾರಿಗಳಲ್ಲಿಯೂ ಗುಣಮಟ್ಟ ಪರಿಶೀಲನೆಗೆ ಸಂಘದ ಸದಸ್ಯರನ್ನು ನಿಯುಕ್ತಿಗೊಳಿಸಿದ್ದು, ಇದು ಸಂಘಕ್ಕೆ ಹೆಮ್ಮೆದಾಯಕವಾಗಿದೆ.
1997ರಲ್ಲಿ ಕಟ್ಟಡ ರಚನೆಗೆ ಸಂಬಂಧಿಸಿದ ಗ್ರಾಹಕರ ಕೈಪಿಡಿ ‘ಆಕಾರ’ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ನಂತರ ಆಕಾರ 2001ರಲ್ಲಿ ಕಟ್ಟಡ ಸಾಮಗ್ರಿಗಳ ಬೃಹತ್ ಪ್ರದರ್ಶನ, ಗೃಹಶೋಭಾ-2001, ಹಾಗೂ ಆಕಾರ 2003ರಲ್ಲಿಯೂ ಮರುಪ್ರಕಟಣೆ ಮಾಡಲಾಯಿತು.
ಜನರ ಬೇಕು-ಬೇಡಿಕೆಗಳ ಸಾರವಾಗಿ ಹೊಸ ಕಟ್ಟಡ ಸಾಮಗ್ರಿಗಳ ತಾಂತ್ರಿಕತೆ, ಆಧುನಿಕ ಶೈಲಿಯ ವಸ್ತುಗಳ ಪರಿಚಯ ಮಾಡುವ ಉದ್ದೇಶದಿಂದ 2001ರಲ್ಲಿ ಪ್ರಾರಂಭಿಸಿ ಜನರ ಪ್ರೀತಿ, ವಿಶ್ವಾಸಗಳಿಗೆ ಕಾರಣವಾಯಿತು. ನಂತರ 2003, 2005, 2007, 2009 ಮತ್ತು 2011ರಲ್ಲಿ ಗೃಹಶೋಭಾ ಆಯೋಜಿಸಿ ಹೊಸ ಕಟ್ಟಡ ಸಾಮಗ್ರಿಗಳ ವಿತರಕರಿಗೆ ವೇದಿಕೆ ಒದಗಿಸಲಾಯಿತು. 2013ರಲ್ಲಿ ಬಿಲ್ ಮ್ಯಾಟ್ ಅನ್ನುವ ಹೊಸ ಶಿರೋನಾಮೆಯೊಂದಿಗೆ 2015, 2017, 2024ರಲ್ಲಿ ಅತ್ಯುತ್ತಮ ಪ್ರದರ್ಶನಗಳ ಮೂಲಕ ಗದಗದ ಜನರ ಮನ ಸೆಳೆಯಿತು.
ಇದೇ 2025ರ ಮೇ 29ರಂದು, ಸಂಸ್ಥೆಯ ಸ್ವಂತ ಕಟ್ಟಡ ಸರ್ ಎಂ. ವಿಶ್ವೇಶ್ವರಯ್ಯ ತಾಂತ್ರಿಕ ಕೇಂದ್ರ ಲೋಕಾರ್ಪಣೆಯಾಯಿತು. ಪ್ರತಿವರ್ಷ ಸೆಪ್ಟೆಂಬರ್ 15ರಂದು ಇಂಜಿನಿಯರ್‌ಗಳ ಪಿತಾಮಹ, ಅಪ್ರತಿಮ ಮೇಧಾವಿ, ದಿವ್ಯಚೇತನ, ಮಾನವ ಚಿಂತಕ ಸರ್ ಡಾ. ಎಂ. ವಿಶ್ವೇಶ್ವರಯ್ಯ ಅವರ ಜನ್ಮದಿನದ ಅಂಗವಾಗಿ ಅಭಿಯಂತರರ ದಿನಾಚರಣೆ ವಿಜೃಂಭಣೆಯೊಂದಿಗೆ ಆಚರಿಸುತ್ತಾ, ಅವರ ಸೇವೆ, ಸಾಧನೆಗಳನ್ನು ಮೆಲುಕು ಹಾಕಿ, ಅವರ ಆದರ್ಶಗಳನ್ನು ಪಾಲಿಸುವ ಪಣ ತೊಡಲಾಗಿದೆ.
2024–25ನೇ ಸಾಲಿನಲ್ಲಿ ಸಂಸ್ಥೆ ತನ್ನ ಸ್ಥಾಪನೆಯ 31ನೇ ವರ್ಷವನ್ನು ಪೂರೈಸಿದೆ. ಸಂಸ್ಥೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ನಿರಂತರವಾಗಿ ಸೇವೆ ಸಲ್ಲಿಸಿರುವ ಸದಸ್ಯರನ್ನು ಪ್ರತಿ ವರ್ಷ ಅಭಿಯಂತರ ದಿನಾಚರಣೆಯಂದು ಹಿರಿಯ ಸದಸ್ಯರಾಗಿ ಸನ್ಮಾನಿಸಲಾಗುತ್ತದೆ. ಇದೇ ಸೆ.15ರಂದು ಸಂಸ್ಥೆಯ ಸರ್ ಎಂ. ವಿಶ್ವೇಶ್ವರಯ್ಯ ತಾಂತ್ರಿಕ ಕೇಂದ್ರದಲ್ಲಿ, ಸಂಸ್ಥೆಯ ಹೊಸ ಅಧ್ಯಕ್ಷರು ಹಾಗೂ ಕಾರ್ಯಕಾರಿ ಮಂಡಳಿಯ ಸದಸ್ಯರು ಸೇವಾ ದೀಕ್ಷೆ ಪಡೆದು ಮುಂದಿನ ಒಂದು ವರ್ಷ ನಿಸ್ವಾರ್ಥ ಸೇವೆಗೈಯುವ ಅವಕಾಶ ಪಡೆಯಲಿದ್ದಾರೆ.
ಈ ಕಾರ್ಯಕ್ರಮಕ್ಕೆ ಪ್ರಾಯೋಜಕರಾಗಿ ಸಹಕರಿಸಿದ ರಾಮದೇವ ಟ್ರೇಡರ್ಸ್, ಎಸ್.ಎಚ್.ಎಲ್. ಟೈಲ್ಸ್ ಆಂಡ್ ಗ್ರಾನೈಟ್, ಕೆ.ಟಿ.ಸಿ. ಟ್ರೇಡರ್ಸ್, ಸಿ.ಜಿ. ಲಕ್ಕುಂಡಿ, ಶುಭಲಕ್ಷ್ಮಿ ಫೆಬ್ರಿಕೇಟರ್, ಅಲ್ಟಾಟೆಕ್, ದಾಲ್ಮಿಯಾ ಕಂಪನಿ ವರ್ತಕರನ್ನು ಸಂಸ್ಥೆ ಅಭಿನಂದಿಸುತ್ತದೆ.
— ಇಂ. ಎಂ.ಸಿ. ಐಲಿ