ವಿಜಯಸಾಕ್ಷಿ ಸುದ್ದಿ, ಬೆಂಗಳೂರು : ಆಧುನಿಕ ಕಾಲದಲ್ಲಿ ಮಾನವೀಯ ಸಂಬಂಧಗಳು ಕಣ್ಮರೆಯಾಗುತ್ತಿವೆ. ಜಗತ್ತು ಎಷ್ಟೇ ಬದಲಾದರೂ ಮಾನವ ಸಂಬಂಧಗಳನ್ನು ಸುಭದ್ರಗೊಳಿಸುವುದೇ ನಿಜವಾದ ಗುರು ಧರ್ಮವೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ವಿಜಯನಗರದ ಶ್ರೀ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ಶ್ರೀಮದ್ವೀರಶೈವ ಸದ್ಬೋಧನಾ ಸಂಸ್ಥೆ ಬೆಂಗಳೂರು ಜಿಲ್ಲಾ ಘಟಕದ ಆಶ್ರಯದಲ್ಲಿ ಜರುಗಿದ ಧರ್ಮೋತ್ತೇಜಕ ಸಂಗಮ ಸಮಾವೇಶದ ೨ನೇ ದಿನದ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಸುಖ-ದುಃಖಗಳು ಹಗಲು ರಾತ್ರಿ ಇದ್ದಂತೆ. ಸುಖದಲ್ಲಿ ಹಿಗ್ಗದೇ, ಕಷ್ಟದಲ್ಲಿ ಕುಗ್ಗದೇ ಸಮಾನವಾಗಿ ಬದುಕುವ ಪ್ರವೃತ್ತಿ ನಮ್ಮದಾಗಬೇಕು. ಬೇರು ಇಲ್ಲದಿದ್ದರೆ ಮರ ಉಳಿಯುವುದಿಲ್ಲ. ಹಾಗೆಯೇ ನಂಬಿಕೆ, ಪರಸ್ಪರ ವಿಶ್ವಾಸ ಇಲ್ಲವಾದರೆ ಸಂಬಂಧಗಳು ಉಳಿಯುವುದಿಲ್ಲ. ಕರ್ಮವನ್ನು ಕಳೆದು ಧರ್ಮವನ್ನು ಬಿತ್ತಿ ಬದುಕನ್ನು ಬಂಗಾರಗೊಳಿಸಿದ ಶ್ರೇಯಸ್ಸು ಶ್ರೀ ಜಗದ್ಗುರು ರೇಣುಕಾಚಾರ್ಯರಿಗೆ ಸಲ್ಲುತ್ತದೆ. ಅಂಗ ಅವಗುಣಗಳನ್ನು ಪರಿಹರಿಸಿ ಸಾತ್ವಿಕ ಬದುಕಿಗೆ ಅವರು ಕೊಟ್ಟ ತತ್ವ-ಸಿದ್ಧಾಂತಗಳು ಸಕಲರ ಬಾಳಿಗೆ ಬೆಳಕು ತೋರುತ್ತವೆ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ರಾಜ್ಯ ಬಿಜೆಪಿ ಅಧ್ಯಕ್ಷ ಶಿಕಾರಿಪುರ ಶಾಸಕ ಬಿ.ವೈ. ವಿಜಯೇಂದ್ರ ಮಾತನಾಡಿ, ಬದುಕಿನ ಹಾದಿಯಲ್ಲಿ ಕನಸುಗಳನ್ನು ಕೂಡಿಟ್ಟರೆ ಸಾಲದು. ಅದನ್ನು ನನಸು ಮಾಡಿಕೊಳ್ಳುವ ಮಾರ್ಗವನ್ನು ಕಂಡುಕೊಳ್ಳಬೇಕು. ಧರ್ಮವೆಂದರೆ ಬರೀ ನಂಬಿಕೆಯಲ್ಲ. ನಡತೆ ಬಹಳ ಮುಖ್ಯ. ವೀರಶೈವ ಧರ್ಮದಲ್ಲಿ ಸಂಸ್ಕಾರ ಮತ್ತು ಕಾಯಕ ಜೀವನಕ್ಕೆ ಹೆಚ್ಚು ಪ್ರಾಮುಖ್ಯತೆಯನ್ನು ಕೊಟ್ಟಿದೆ. ಶ್ರೀ ರಂಭಾಪುರಿ ಜಗದ್ಗುರುಗಳ ಧರ್ಮಯಜ್ಞ ಎಲ್ಲೆಡೆ ನಡೆಯುತ್ತಿರುವುದರಿಂದ ಆರೋಗ್ಯಪೂರ್ಣ ಸಮಾಜ ಸಂವರ್ಧನೆಗೆ ಹೆಚ್ಚು ಬಲ ದೊರಕುತ್ತಿರುವುದು ನಮ್ಮೆಲ್ಲರ ಸೌಭಾಗ್ಯವೆಂದರು.
ದೊಡ್ಡಗುಣಿ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ಪ್ರಾಸ್ತಾವಿಕ ಮಾತನಾಡಿ, ವ್ಯಕ್ತಿಗೆ ಕೊಳೆ ಅಂಟಿದರೆ ಶುದ್ಧ ಮಾಡಬಹುದು. ಆದರೆ ವ್ಯಕ್ತಿತ್ವವೇ ಕೊಳಕಾಗಿದ್ದರೆ ತೊಳೆಯುವುದು ಬಲು ಕಷ್ಟ. ಬದುಕು ಎಷ್ಟು ಶ್ರೀಮಂತವಾಗಿದೆ ಅನ್ನುವುದಕ್ಕಿಂತ ಎಷ್ಟು ನೆಮ್ಮದಿಯಾಗಿದೆ ಎಂಬುದು ಮುಖ್ಯ. ವೀರಶೈವ ಲಿಂಗಾಯತ ಧರ್ಮದಲ್ಲಿ ಸದ್ಗುಣ ಸಂಸ್ಕಾರದಿಂದ ಬಲು ಎತ್ತರಕ್ಕೆ ಬೆಳೆಯಲು ಅವಕಾಶ ಕಲ್ಪಿಸಿದೆ. ಶ್ರೀ ರಂಭಾಪುರಿ ಜಗದ್ಗುರುಗಳ ದೂರದರ್ಶಿತ್ವ ವಿಶಾಲ ಮನೋಭಾವನೆಗಳು ಜೀವ ಜಗತ್ತಿಗೆ ಬೆಳಕು ತೋರುತ್ತಿವೆ ಎಂದರು.
ಕಲ್ಲುಬಾಳು ಮಠದ ಶಿವಾನಂದ ಶಿವಾಚಾರ್ಯ ಸ್ವಾಮಿಗಳು ಸದಾಶಯ ನುಡಿ ಸಲ್ಲಿಸಿದರು. ಎಡೆಯೂರು, ಸಂಗೊಳ್ಳಿ, ಸಿದ್ಧರಬೆಟ್ಟ, ನಾಗಲಾಪುರ ಮಠದ ಶ್ರೀಗಳು ಉಪಸ್ಥಿತರಿದ್ದರು. ನಾಗಭೂಷಣ ಬಣಕಾರ ಇವರಿಂದ ಯೋಗಾಸನ ಪ್ರದರ್ಶನ ಜರುಗಿತು. ಕರ್ನಾಟಕ ವೀರಶೈವ ವಿದ್ಯಾಭಿವೃದ್ಧಿ ಸಮಿತಿ ಅಧ್ಯಕ್ಷ ಬಿ.ಎಸ್. ಪರಮಶಿವಯ್ಯ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.
ಶಿವಶಂಕರ ಶಾಸ್ತಿçಗಳಿಂದ ಪ್ರಾರ್ಥನಾ ಭಕ್ತಿಗೀತೆ ಜರುಗಿತು. ಶ್ರೀಮದ್ವೀರಶೈವ ಸದ್ಬೋಧನಾ ಸಂಸ್ಥೆ ಬೆಂಗಳೂರು ಜಿಲ್ಲಾ ಘಟಕದ ಅಧ್ಯಕ್ಷ ಬೀರೂರು ಶಿವಸ್ವಾಮಿ ಸ್ವಾಗತಿಸಿದರು. ಸಂಸ್ಥೆಯ ಸದಸ್ಯ ಚಂದ್ರಶೇಖರ ನಾಗರಾಳಮಠ ನಿರೂಪಿಸಿದರು.ಎಸ್.ಬಿ. ವಿಜಯಕುಮಾರ್ ಅನಿವಾಲ, ನಾಗರಾಜು, ಗುರುಲಿಂಗಸ್ವಾಮಿ, ಶರಣಗೌಡ ಪಾಟೀಲ, ಶಶಿಕುಮಾರ ಅನ್ನ ದಾಸೋಹ ಸೇವೆ ಸಲ್ಲಿಸಿದರು.
Advertisement