ವಿಜಯಸಾಕ್ಷಿ ಸುದ್ದಿ, ಗದಗ : ತಾಲೂಕಿನ ನೀರಲಗಿ ಗ್ರಾಮ ಪಂಚಾಯಿತಿ ಅಧ್ಯಕ್ಷರ ವಿರುದ್ಧ ಪಕ್ಷಾತೀತವಾಗಿ ಸದಸ್ಯರು ಅವಿಶ್ವಾಸ ಗೊತ್ತುವಳಿಗೆ ಮುಂದಾಗಿದ್ದಾರೆ. ಸದಸ್ಯರ ಹಾಗೂ ಅಧಿಕಾರಿಗಳೊಂದಿಗೆ ಸರಿಯಾಗಿ ಸ್ಪಂದಿಸದ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರನ್ನು ಕೂಡಲೇ ವಜಾಗೊಳಿಸಬೇಕು ಎಂದು ಆಗ್ರಹಿಸಿ ಗದಗ ಉಪವಿಭಾಗಾಧಿಕಾರಿಗಳಿಗೆ ಸದಸ್ಯರು ಮನವಿ ಸಲ್ಲಿಸಿದ್ದಾರೆ.
ನಾಗಸಮುದ್ರ, ಬೆನಕೊಪ್ಪ ಹಾಗೂ ನೀರಲಗಿಯ ಮೂರು ಗ್ರಾಮಗಳನ್ನು ಒಳಗೊಂಡ ಗ್ರಾಮ ಪಂಚಾಯಿತಿಗೆ ಒಟ್ಟು 11 ಸದಸ್ಯರು ಆಯ್ಕೆ ಆಗಿದ್ದಾರೆ. ಗ್ರಾಮ ಪಂಚಾಯಿತಿ ಅಧ್ಯಕ್ಷರನ್ನು ಹೊರತುಪಡಿಸಿ ಉಳಿದ 10 ಸದಸ್ಯರು ಅಧ್ಯಕ್ಷರ ವಿರುದ್ಧ ಆಕ್ರೋಶ ಹೊರಹಾಕಿದ್ದು, ಯಾವುದೇ ಕೆಲಸಗಳನ್ನು ಕೇಳಲು ಹೋದಾಗ ಸರಿಯಾಗಿ ಸ್ಪಂದಿಸುತ್ತಿಲ್ಲ. ಜೊತೆಗೆ, ಸಣ್ಣಪುಟ್ಟ ಕೆಲಸಗಳಿಗೂ ಕೂಡ ಸಹಿ ಮಾಡದೆ ಜನ ವಿರೋಧಿ ನೀತಿಯನ್ನು ಅಧ್ಯಕ್ಷರು ಅನುಸರಿಸುತ್ತಿದ್ದಾರೆ ಎಂದು ಸದಸ್ಯರು ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ.
ಸಾರ್ವಜನಿಕರು ತಮ್ಮ ಕಷ್ಟ ಹೇಳಿಕೊಂಡು ನಮ್ಮ ಬಳಿ ಬಂದಾಗ ಅವರಿಗೆ ಉತ್ತರ ಹೇಳುವ ಪರಿಸ್ಥಿತಿಯಲ್ಲಿ ಯಾವುದೇ ಸದಸ್ಯರು ಇಲ್ಲ. ಬೀದಿ ದೀಪ, ಚರಂಡಿ ದುರಸ್ಥಿ, ನೀರಿನ ವ್ಯವಸ್ಥೆಯನ್ನು ಸರಿಪಡಿಸಬೇಕಾದ ಅನಿವಾರ್ಯತೆ ಇದ್ದಲ್ಲಿ ಗ್ರಾ.ಪಂ ಅಧ್ಯಕ್ಷರು ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ. ಕೂಡಲೇ ಇಂತಹ ಜನ ವಿರೋಧಿ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿಗೆ ಅವಕಾಶ ಮಾಡಿಕೊಡಬೇಕು. ಇಲ್ಲದಿದ್ದರೆ 10 ಜನ ಸದಸ್ಯರು ಸಾಮೂಹಿಕ ರಾಜೀನಾಮೆ ನೀಡಬೇಕಾಗುತ್ತದೆ ಎಂದು ನಾಗಸಮುದ್ರ ಗ್ರಾ.ಪಂ ಸದಸ್ಯ ಮಂಜುನಾಥ ಪರ್ವತಗೌಡ್ರ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ನೀರಲಗಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರುದ್ರೇಶ ಕುರುಡಗಿ, ಬಸನಗೌಡ ಪಾಟೀಲ, ವೀರಪ್ಪ ಹುಯಿಲಗೋಳ, ಮೈಲಾರಪ್ಪ ದೊಡ್ಡಮನಿ, ಮಂಜುನಾಥ ಪರ್ವತಗೌಡ್ರ, ವೀರಮ್ಮ ವಾಲ್ಮೀಕಿ, ಯಲ್ಲಮ್ಮ ಸಂದಿಗೌಡ್ರ, ಮಮತಾಜೀ ಬೇಗಂ ಬಾಬಖಾನವರ, ನೀಲವ್ವ ಮಣ್ಣೂರ, ಅನಸವ್ವ ದೇವರಡ್ಡಿ ಉಪಸ್ಥಿತರಿದ್ದರು.
ಸದರಿ ಗ್ರಾ.ಪಂ ಅಧ್ಯಕ್ಷರ ಪತಿ ಹಾಗೂ ಅವರ ಕುಟುಂಬಸ್ಥರ ಹಾವಳಿ ವಿಪರೀತವಾಗಿದ್ದು, ಯಾವುದೇ ಕೆಲಸವನ್ನು ಮಾಡಿಸಲು ಬಿಡುತ್ತಿಲ್ಲ. ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡುತ್ತಿಲ್ಲ. ಕೂಡಲೇ ಅವರ ವಿರುದ್ಧ ಅವಿಶ್ವಾಸ ಮಂಡಿಸಲು ಅವಕಾಶ ಮಾಡಿಕೊಡಬೇಕೆಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.