ಚಿಕ್ಕಬಳ್ಳಾಪುರ: 20ಕ್ಕೂ ಹೆಚ್ಚು ರೌಡಿ ಗ್ಯಾಂಗ್ ಮನೆಗೆ ನುಗ್ಗಿ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ ಮನೆಯಲ್ಲಿದ್ದ ಚಿನ್ನಾಭರಣಗಳನ್ನ ದೋಚಿರುವ ಘಟನೆ ಚಿಕ್ಕಬಳ್ಳಾಪುರ ನಗರದ ನಕ್ಕಲಕುಂಟೆ ಬಡಾವಣೆಯಲ್ಲಿ ನಡೆದಿದೆ.
ಬಡಾವಣೆಯ ಬರಕತ್ ಎನ್ನುವಾತನ ಮೇಲೆ 20 ಜನರ ಗ್ಯಾಂಗ್ ಅಟ್ಯಾಕ್ ಮಾಡಿ ನಡು ರಸ್ತೆಯಲ್ಲೇ ದೊಣ್ಣೆಗಳಿಂದ ಹಲ್ಲೆ ನಡೆಸಿದ್ದಾರೆ. ಹಲ್ಲೆ ನಡೆಸಿದ ನಂತರ ಮನೆಯಲ್ಲಿದ್ದ ಚಿನ್ನಾಭರಣಗಳು, ಸಿಸಿ ಟಿವಿಯ ಡಿವಿಆರ್ ನ್ನ ಕದ್ದೋಯ್ದಿದ್ದಾರಂತೆ.
ಇದೇ ಅಕ್ಟೋಬರ್ 21 ರಂದು ಘಟನೆ ನಡೆದಿದ್ದು, ಘಟನೆ ದೃಶ್ಯಾವಳಿಗಳು ಪಕ್ಕದ ಮನೆಗಳಲ್ಲಿನ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು,. ಘಟನೆಯಲ್ಲಿ ಗಾಯಗೊಂಡ ಬರಕತ್ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಸಮೀಯುಲ್ಲಾ, ಅಜ್ಜು@ ಅಮ್ಜದ್ ಪಾಷ, ಶೌಕತ್, ಸದ್ದು ಸೇರಿದಂತೆ 20 ಜನರ ವಿರುದ್ದ ದೂರು ನೀಡಿದ್ದು, ಪೊಲೀಸರು 12 ಜನ ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ,
ಘಟನೆಗೆ ಬರಕತ್ ಹಾಗೂ ಆತನ ಪತ್ನಿಯ ನಡುವಿನ ಕೌಟುಂಬಿಕ ಕಲಹ ಹಾಗೂ ಬಾವಮೈದುರ ಜೊತೆ ಹಣಕಾಸು ವಿಚಾರದಲ್ಲಿ ನಡೆದಿರುವ ವೈಷಮ್ಯ ಕಾರಣ ಎನ್ನಲಾಗಿದೆ.
ಘಟನೆ ಬಗ್ಗೆ ದೂರುದಾರ ಬರಕತ್ ಪ್ರತಿಕ್ರಿಯೆ ನೀಡಿದ್ದು, ತಾನು ಒಬ್ಬನೇ ಇದ್ದಾಗ ಆರೊಪಿಗಳು ರೌಡಿಗಳಂತೆ ಗುಂಪುಕಟ್ಟಿಕೊಂಡು ಮನೆಯ ಬಳಿ ಬಂದು ದಾಂದಲೆ ನಡೆಸಿ ತನ್ನ ಮೇಲೆ ಮನಸೋ ಇಚ್ಚೆ ದೊಣ್ಣೆಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.
ಘಟನೆಯ ನಂತರ ಆರೊಪಿಗಳು ತಲೆಮೆರೆಸಿಕೊಂಡಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಬರಕತ್ ಎನ್ನುವವರ ಮೇಲೆ ರೌಡಿಗಳಂತೆ ವರ್ತಿಸಿ ದೌರ್ಜನ್ಯ ಮಾಡಿರೊದು ಬಡಾವಣೆಯ ನಿವಾಸಿಗಳಲ್ಲಿ ಆತಂಕ ಮನೆ ಮಾಡಿದೆ.